ADVERTISEMENT

ಟಿಎಂಸಿ ಪ್ರಣಾಳಿಕೆ ಬಿಡುಗಡೆ: ಪ್ರತೀ ಕುಟುಂಬಕ್ಕೂ ಆದಾಯ ಸೇರಿ ಹಲವು ಆಶ್ವಾಸನೆ

ಪಿಟಿಐ
Published 17 ಮಾರ್ಚ್ 2021, 14:57 IST
Last Updated 17 ಮಾರ್ಚ್ 2021, 14:57 IST
ಪ್ರಣಾಳಿಕೆ ಬಿಡುಗಡೆ ಮಾಡಿದ ಮಮತಾ ಬ್ಯಾನರ್ಜಿ ಚಿತ್ರ:Twitter/@BanglarGorboMB
ಪ್ರಣಾಳಿಕೆ ಬಿಡುಗಡೆ ಮಾಡಿದ ಮಮತಾ ಬ್ಯಾನರ್ಜಿ ಚಿತ್ರ:Twitter/@BanglarGorboMB   

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬುಧವಾರ ಪ್ರಣಾಳಿಕೆಯನ್ನು ಅನಾವರಣಗೊಳಿಸಿದ್ದು, ಎಲ್ಲ ಕುಟುಂಬಗಳಿಗೂ ಆದಾಯ ಯೋಜನೆ, ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಮತ್ತು ವಿವಿಧ ಸಮುದಾಯಗಳನ್ನು ಒಬಿಸಿಗೆ ಸೇರ್ಪಡೆಗೊಳಿಸಲು ಪರಿಶೀಲನೆಗೆ ಕಾರ್ಯಪಡೆ ರಚಿಸುವ ಭರವಸೆ ನೀಡಿದ್ದಾರೆ.

ತಮ್ಮ ಸರ್ಕಾರವು ರಾಜ್ಯದಲ್ಲಿ ಬಡತನವನ್ನು ಶೇ. 40 ರಷ್ಟು ತಗ್ಗಿಸಿದೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದ್ದು, ರೈತರಿಗೆ ವಾರ್ಷಿಕ ಆರ್ಥಿಕ ಸಹಾಯವನ್ನು 6,000 ರೂ.ಗಳಿಂದ 10,000 ರೂ.ಗೆ ಹೆಚ್ಚಿಸುವ ಆಶ್ವಾಸನೆ ನೀಡಿದ್ದಾರೆ.

ADVERTISEMENT

"ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಪ್ರತಿ ಕುಟುಂಬಕ್ಕೆ ಕನಿಷ್ಠ ಮೂಲ ಆದಾಯ ಯೋಜನೆ ಜಾರಿಗೆ ಯೋಜಿಸಿದ್ದೇವೆ. ಇದರ ಅಡಿಯಲ್ಲಿ 1.6 ಕೋಟಿ ಸಾಮಾನ್ಯ ವರ್ಗದ ಕುಟುಂಬಗಳಿಗೆ ತಿಂಗಳಿಗೆ 500 ರೂ., ಎಸ್‌ಸಿ / ಎಸ್‌ಟಿ ವರ್ಗದ ಕುಟುಂಬಗಳಿಗೆ 1,000 ರೂ. ಸಿಗುತ್ತದೆ. ಹಣವನ್ನು ಕುಟುಂಬದ ಮಹಿಳಾ ಮುಖ್ಯಸ್ಥೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ , " ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ನಾವು 10 ಲಕ್ಷ ಹೊಸ ಎಂಎಸ್‌ಎಂಇ ಮತ್ತು 2000 ದೊಡ್ಡ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುತ್ತೇವೆ ಎಂದು ಅವರು ಹೇಳಿದರು.

"ಮಹೀಶ್ಯ, ಟಿಲಿ, ತಮುಲ್ ಮತ್ತು ಸಹಾಸ್‌ನಂತಹ ಒಬಿಸಿಗಳೆಂದು ಗುರುತಿಸಲಾಗದ ಎಲ್ಲ ಸಮುದಾಯಗಳಿಗೆ ಒಬಿಸಿ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲು ವಿಶೇಷ ಕಾರ್ಯಪಡೆ ರಚಿಸುತ್ತೇವೆ. ಮಹತೋ ಸಮುದಾಯಕ್ಕೆ ಎಸ್ಟಿ ಸ್ಥಾನಮಾನವನ್ನು ನೀಡುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದು ಟಿಎಂಸಿ ಮುಖ್ಯಸ್ಥೆ ಹೇಳಿದರು.

ಉತ್ತರ ಬಂಗಾಳದ ತೆರೈ ಮತ್ತು ದೂರ್ಸ್ ಪ್ರದೇಶದ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.