ADVERTISEMENT

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡಿನಲ್ಲಿ 13 ಪಕ್ಷಗಳ ಸರ್ವಾನುಮತದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 15:12 IST
Last Updated 12 ಜುಲೈ 2021, 15:12 IST
   

ಚೆನ್ನೈ: ‘ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡಬಾರದು’ ಎಂದು ತಮಿಳುನಾಡಿನ ಸರ್ವಪಕ್ಷಗಳ ಸಭೆ ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದ್ದು, ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ.

ಯೋಜನೆ ಕುರಿತ ಚರ್ಚೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸೋಮವಾರ ಕರೆದಿದ್ದ ಸಭೆಯಲ್ಲಿ 13 ಪಕ್ಷಗಳ ಮುಖಂಡರು ಒಮ್ಮತದ ನಿಲುವು ವ್ಯಕ್ತಪಡಿಸಿದ್ದು, ‘ಯೋಜನೆಯನ್ನು ತಡೆಯಲು ಸರ್ಕಾರಕ್ಕೆ ಸಹಕಾರ, ಬೆಂಬಲ ನೀಡಲಿದ್ದೇವೆ’ ಎಂದರು.

ಕರ್ನಾಟಕ ಸರ್ಕಾರ ಯೋಜನೆಯನ್ನು ಜಾರಿಗೊಳಿಸದಂತೆ ತಡೆಯಲು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರುವುದು ಒಳಗೊಂಡಂತೆ ಎಲ್ಲ ರೀತಿಯ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲೂ ಸಭೆಯು ತೀರ್ಮಾನಿಸಿತು.

ADVERTISEMENT

ತಮಿಳುನಾಡು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲು ನವದೆಹಲಿಗೆ ಸರ್ವಪಕ್ಷಗಳ ನಿಯೋಗವು ತೆರಳಿ ನಿರ್ಣಯದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಅವರಿಗೆ ನೀಡಲು ನಿರ್ಧರಿಸಿತು.

ಸಭೆಯು ಸುಮಾರು ಎರಡು ಗಂಟೆ ನಡೆದಿದ್ದು, ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಟಾಲಿನ್‌ ಅವರು, ‘ಕರ್ನಾಟಕ ಸರ್ಕಾರ ಉದ್ದೇಶಿಸಿದಂತೆ ಅಣೆಕಟ್ಟು ನಿರ್ಮಾಣ ಮಾಡಿದರೆ ತಮಿಳುನಾಡು ಸಾಕಷ್ಟು ಕಳೆದುಕೊಳ್ಳಬೇಕಾದಿತು’ ಎಂದು ಹೇಳಿದರು.

‘ಕಾವೇರಿ ನದಿಪಾತ್ರದಲ್ಲಿ ನಿರ್ಮಾಣ ಚಟುವಟಿಕೆ ಕೈಗೊಳ್ಳಬಾರದು ಎಂಬುದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿದೆ. ಆದರೂ, ಅಣೆಕಟ್ಟು ನಿರ್ಮಿಸಲು ಕರ್ನಾಟಕ ಮುಂದಾಗಿದೆ. ಇದರಿಂದ ರಾಜ್ಯದ ರೈತರಿಗೆ ಧಕ್ಕೆಯಾಗಲಿದೆ’ ಎಂದರು.

‘ಕರ್ನಾಟಕದ ಈ ಕ್ರಮ ಸಾಂವಿಧಾನಿಕ ಕಾಯ್ದೆಗಳಿಗೆ ಸವಾಲು ಹಾಕುವಂತದ್ದಾಗಿದೆ. ಈ ಕಾರಣದಿಂದ ಕೇಂದ್ರದ ಸಂಬಂಧಿಸಿದ ಸಚಿವಾಲಯಗಳು ಯೋಜನೆಗೆ ಯಾವುದೇ ರೀತಿ ಅನುಮೋದನೆ ನೀಡಬಾರದು’ ಎಂಬ ನಿರ್ಣಯವನ್ನು ಓದಲಾಯಿತು.

ತಮಿಳುನಾಡು ಸರ್ಕಾರದ ವಿರೋಧದ ನಡುವೆಯೂ ಮೇಕೆದಾಟು ಯೋಜನೆ ನಿರ್ಮಾಣ ಜಾರಿಗೊಳಿಸಿಯೇ ಸಿದ್ಧ ಎಂದು ಕರ್ನಾಟಕ ಇತ್ತೀಚೆಗೆ ಪ್ರತಿಪಾದಿಸಿತ್ತು.

ಯೋಜನೆಯಿಂದ ತಮಿಳುನಾಡು ರೈತರ ಹಿತಾಸಕ್ತಿಗೆ ಧಕ್ಕೆಯಾಗದು ಎಂಬ ಕರ್ನಾಟಕದ ವಾದವನ್ನು ಸ್ಟಾಲಿನ್‌ ತಳ್ಳಿಹಾಕಿದರು. ಅಣೆಕಟ್ಟು ನಿರ್ಮಿಸಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ಕಾವೇರಿ ನದಿ ಕೇವಲ ಕರ್ನಾಟಕಕ್ಕೆ ಸೇರಿದ್ದಲ್ಲ. ತಮಿಳುನಾಡು ಕೂಡಾ ಸಮಾನ ಹಕ್ಕು ಹೊಂದಿದೆ. ವಾಸ್ತವವಾಗಿ ಕಾವೇರಿ ನದಿಯು ತಮಿಳುನಾಡಿನಲ್ಲಿಯೇ ಹೆಚ್ಚು ದೂರ ಹರಿಯುತ್ತದೆ’ ಎಂದು ಸ್ಟಾಲಿನ್ ಹೇಳಿದರು.

ಸರ್ವಪಕ್ಷ ಸಭೆಯ ಮೂಲಕ ಕರ್ನಾಟಕ ಸರ್ಕಾರಕ್ಕೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ತಮಿಳುನಾಡಿನ ರಾಜಕೀಯ ಪಕ್ಷಗಳು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿವೆ ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.