ADVERTISEMENT

‘ಸೇತುಸಮುದ್ರಂ’ ಅನುಷ್ಠಾನಕ್ಕೆ ತಮಿಳುನಾಡು ಒತ್ತಾಯ

ಕೇಂದ್ರ ಸರ್ಕಾರ ಒತ್ತಾಯಿಸುವ ನಿರ್ಣಯ ಅಂಗೀಕರಿಸಿದ ವಿಧಾನಸಭೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 13:31 IST
Last Updated 12 ಜನವರಿ 2023, 13:31 IST
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್   

ಚೆನ್ನೈ: ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಗುರುವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ಮೀನುಗಾರರ ಅಭಿಪ್ರಾಯಗಳನ್ನು ತಿಳಿಯಬೇಕು ಮತ್ತು ಯೋಜನೆಗಾಗಿ ಹಿಂದಿನ ಹೂಳೆತ್ತುವ ಕೆಲಸ ವಿಶ್ಲೇಷಿಸಬೇಕು. ಇದು ಜನರಿಗೆ ಹೆಚ್ಚಿನ ಪ್ರಯೋಜನ ನೀಡುವುದಾದರೆ ಬೆಂಬಲಿಸಲಾಗುವುದು ಎಂದು ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆಯ ಪೊಲ್ಲಾಚಿ ವಿ. ಜಯರಾಮನ್ ತಿಳಿಸಿದರು.

ರಾಮಸೇತುವಿಗೆ ಯಾವುದೇ ಹಾನಿಯಾಗದಿದ್ದರೆ ಯೋಜನೆಯನ್ನು ತಮ್ಮ ಪಕ್ಷ ಸ್ವಾಗತಿಸುತ್ತದೆ ಎಂದು ಬಿಜೆಪಿಯ ನೈನಾರ್ ನಾಗೇಂದ್ರನ್ ಹೇಳಿದ್ದಾರೆ.

ADVERTISEMENT

ಈ ಯೋಜನೆಗೆ 1963 ರಲ್ಲಿ ನೆಹರು ನೇತೃತ್ವದ ಕ್ಯಾಬಿನೆಟ್ ಅನುಮೋದನೆ ನೀಡಿತ್ತು. ಇದು ನಾಲ್ಕನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿತ್ತು. ಅಣ್ಣಾದೊರೈ ಅವರು ಮುಖ್ಯಮಂತ್ರಿಯಾದ ನಂತರ 1967ರಲ್ಲಿ ಈ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದರು.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿ, ಈ ಯೋಜನೆಯನ್ನು ಆರಂಭದಿಂದಲೂ ಬೆಂಬಲಿಸುತ್ತಿದ್ದ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಇದ್ದಕ್ಕಿದ್ದಂತೆ ತಮ್ಮ ನಿಲುವು ಬದಲಾಯಿಸಿದರು ಮತ್ತು ಅದರ ವಿರುದ್ಧ ನ್ಯಾಯಾಲಯಕ್ಕೆ ಹೋದರು. ರಾಜಕೀಯ ಅಡೆತಡೆಗಳು ಇಲ್ಲದಿದ್ದರೆ, ಸುಮಾರು 10 ವರ್ಷದ ಹಿಂದೆ ಯೋಜನೆ ಪ್ರಾರಂಭವಾದ ನಂತರ ಸಾಕಷ್ಟು ಪ್ರಯೋಜನಗಳು ಇರುತ್ತಿದ್ದವು ಎಂದರು.

ಆರ್ಥಿಕ ಲಾಭ ಸೇರಿದಂತೆ ಯೋಜನೆಯ ಹಲವಾರು ಉಪಯೋಗಗಳ ಬಗ್ಗೆ ಕರುಣಾನಿಧಿ ಅವರ ಅಭಿಪ್ರಾಯಗಳನ್ನು ಉಲ್ಲೇಖಿಸಿದ ಸಿ.ಎಂ, ಇದು ಕೈಗಾರಿಕೆ, ವಾಣಿಜ್ಯ ಮತ್ತು ಕಡಲ ವ್ಯಾಪಾರದ ಬೆಳವಣಿಗೆ ಉತ್ತೇಜಿಸುತ್ತದೆ ಎಂದು ಹೇಳಿದರು.

ಮೀನುಗಾರರ ಆರ್ಥಿಕ ಸ್ಥಿತಿ ಹೆಚ್ಚಾಗುತ್ತದೆ. 50,000 ಕ್ಕೂ ಹೆಚ್ಚು ಜನರು ನಿರಂತರವಾಗಿ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶ ಪಡೆಯಲಿದ್ದಾರೆ. ಈ ಕಾಲುವೆಯು ಮುನ್ನಾರ್ ಕೊಲ್ಲಿಯಿಂದ ಪಾಲ್ಕ್ ಜಲಸಂಧಿಯವರೆಗೆ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಹಡಗುಗಳ ದೂರ ಮತ್ತು ಪ್ರಯಾಣದ ಸಮಯವು ಕಡಿಮೆಯಾಗುತ್ತದೆ ಮತ್ತು ಸರಕು ನಿರ್ವಹಣಾ ಸಾಮರ್ಥ್ಯವು ಹೆಚ್ಚಾಗುತ್ತದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.