ADVERTISEMENT

‘ಜೈ ಶ್ರೀರಾಂ’ ಘೋಷಣೆ: ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿವಾದ

ಪಿಟಿಐ
Published 13 ಏಪ್ರಿಲ್ 2025, 16:32 IST
Last Updated 13 ಏಪ್ರಿಲ್ 2025, 16:32 IST
ಆರ್.ಎನ್. ರವಿ
ಆರ್.ಎನ್. ರವಿ   

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಕಾಲೇಜೊಂದರ ವಿದ್ಯಾರ್ಥಿಗಳಿಗೆ ‘ಜೈ ಶ್ರೀರಾಂ’ ಎಂಬ ಘೋಷಣೆ ಕೂಗುವಂತೆ ಹೇಳಿದ್ದಾರೆ ಎಂಬ ವರದಿಯು ತಮಿಳುನಾಡಿನಲ್ಲಿ ವಿವಾದ ಸೃಷ್ಟಿಸಿದೆ.

ರವಿ ಅವರು ಪ್ರತಿಜ್ಞಾವಿಧಿಗೆ, ಧರ್ಮನಿರಪೇಕ್ಷ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಶಿಕ್ಷಣ ತಜ್ಞರ ಸಂಘಟನೆಯಾದ ಎಸ್‌ಪಿಸಿಎಸ್‌ಎಸ್‌–ಟಿಎನ್ ಆರೋಪಿಸಿದೆ. ರವಿ ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆಯಬೇಕು ಎಂದು ಸಂಘಟನೆಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಒತ್ತಾಯಿಸಿದೆ.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರವಿ ಅವರು ನಡೆದುಕೊಂಡಿಲ್ಲ ಎಂದು ಕೂಡ ಸಂಘಟನೆ ದೂರಿದೆ. ಸಾಹಿತ್ಯ ಸ್ಪರ್ಧೆಯೊಂದರ ವಿಜೇತರಿಗೆ ಬಹುಮಾನ ವಿತರಣೆ ಮಾಡಲು ರವಿ ಅವರನ್ನು ಮದುರೈನ ಸರ್ಕಾರಿ ಅನುದಾನಿತ ಕಾಲೇಜೊಂದಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.

ADVERTISEMENT

ಶನಿವಾರ ನಡೆದ ಈ ಕಾರ್ಯಕ್ರಮದಲ್ಲಿ ರವಿ ಅವರು, ಜೈ ಶ್ರೀರಾಂ ಎಂದು ಮೂರು ಬಾರಿ ಹೇಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು.

ನಿರ್ದಿಷ್ಟ ಧರ್ಮವೊಂದರ ದೇವರ ಹೆಸರನ್ನು ಪಠಿಸುವ ಮೂಲಕ, ಅದನ್ನು ಮೂರು ಬಾರಿ ಹೇಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವ ಮೂಲಕ ರವಿ ಅವರು ಸಂವಿಧಾನವನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಿ.ಬಿ. ಪ್ರಿನ್ಸ್‌ ಗಜೇಂದ್ರ ಬಾಬು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.