ADVERTISEMENT

ತಮಿಳುನಾಡಿನಲ್ಲಿ ಪೊಲೀಸ್‌ ಕ್ರೌರ್ಯಕ್ಕೆ ಮತ್ತೊಂದು ಬಲಿ: ಕಸ್ಟಡಿಯಲ್ಲೇ ಯುವಕ ಸಾವು

ಇಬ್ಬರು ಪೊಲೀಸ್‌ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 2:47 IST
Last Updated 29 ಜೂನ್ 2020, 2:47 IST
   

ಚೆನ್ನೈ: ತೂತ್ತುಕುಡಿ ಜಿಲ್ಲೆಯಲ್ಲಿ ಪೊಲೀಸ್‌ ವಶದಲ್ಲಿದ್ದಾಗಲೇ ತಂದೆ ಮತ್ತು ಮಗ ಸಾವನ್ನಪ್ಪಿ, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತಿರುವ ನಡುವೆಯೇ, ಕಸ್ಟಡಿಯಲ್ಲಿದ್ದಾಗ ಗಾಯಗೊಂಡಿದ್ದ ಯುವಕನೊಬ್ಬ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ತೆಂಕಾಸಿ ಜಿಲ್ಲೆಯ ವಿ.ಕೆ.ಪುದೂರು ಪಟ್ಟಣದಲ್ಲಿ ಆಟೊ ಚಾಲಕರಾಗಿರುವ ಎನ್‌.ಕುಮಾರೇಶನ್‌ ಮೃತ ಯುವಕ. ತೀವ್ರವಾಗಿ ಗಾಯಗೊಂಡಿದ್ದ ಕುಮಾರೇಶನ್‌ ಅವರನ್ನು ಜೂನ್‌ 13ರಂದು ತಿರುನೆಲ್ವೇಲಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

’ಜಮೀನು ವಿವಾದಕ್ಕೆ ಸಂಬಂಧಿಸಿದ ದೂರಿನ ಮೇಲೆ ನನ್ನ ಮಗ‌ನನ್ನು ಮೇ 10ರಂದು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಸಬ್‌ಇನ್‌ಸ್ಪೆಕ್ಟರ್‌ ಚಂದ್ರಶೇಖರ್‌ ಹಾಗೂ ಕಾನ್‌ಸ್ಟೆಬಲ್‌ ಕುಮಾರ್‌ ಆತನನ್ನು ತೀವ್ರವಾಗಿ ಥಳಿಸಿದ್ದಾರೆ. ಆತ‌ನ ಗುಪ್ತಾಂಗಕ್ಕೂ ಹೊಡೆದಿದ್ದಾರೆ‘ ಎಂದು ಕುಮಾರೇಶನ್‌ ತಂದೆ ನವನೀತಕೃಷ್ಣನ್‌ ಹೇಳಿದ್ದಾರೆ.

ADVERTISEMENT

ಯುವಕ ಸಾವನ್ನಪ್ಪಿದ ಬೆನ್ನಲ್ಲೇ ಸ್ಥಳೀಯರು ಪ್ರತಿಭಟಿಸಿ, ಇಬ್ಬರು ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದರು. ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಈ ಇಬ್ಬರು ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್‌ 174 (3) ಅನ್ವಯ (ಅನುಮಾನಾಸ್ಪದ ಸಾವು) ಪ್ರಕರಣ ದಾಖಲಿಸಿದ್ದಾರೆ.

‘ಪ್ರಜಾವಾಣಿ‘ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನವನೀತಕೃಷ್ಣನ್‌, ‘ಠಾಣೆಯಲ್ಲಿ ಪೊಲೀಸರು ನೀಡುತ್ತಿದ್ದ ಚಿತ್ರಹಿಂಸೆ ಬಗ್ಗೆ ಕುಮಾರೇಶನ್‌ ನನಗೆ ಹೇಳಿರಲಿಲ್ಲ. ಈ ವಿಷಯವನ್ನು ಬಾಯಿಬಿಟ್ಟರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಆತನಿಗೆ ಬೆದರಿಕೆ ಹಾಕಿದ್ದರು. ಜೂನ್‌ 10ರಂದು ಉಸಿರಾಟದಲ್ಲಿ ತೊಂದರೆ ಎಂದು ಹೇಳಿದ ಮಗ, ರಕ್ತವಾಂತಿ ಮಾಡಿಕೊಂಡಾಗ ಇಡೀ ವಿಷಯ ಗೊತ್ತಾಯಿತು‘ ಎಂದು ವಿವರಿಸಿದರು.

’ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆತನ ಮೈಮೇಲಿನ ಗಾಯಗಳ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿ, ಸತ್ಯ ಹೇಳುವಂತೆ ಸೂಚಿಸಿದಾಗ ಕುಮಾರೇಶನ್‌, ಪೊಲೀಸರು ನೀಡಿದ ಚಿತ್ರಹಿಂಸೆಯನ್ನು ವಿವರಿಸಿದ‘ ಎಂದೂ ಹೇಳಿದರು.

‘ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿದರು. ನಂತರ ಸಬ್‌ಇನ್‌ಸ್ಪೆಕ್ಟರ್ ಜೋರಾಗಿ ನನ್ನ ಎದೆ ಹಾಗೂ ಗುಪ್ತಾಂಗ ಗುದ್ದಿದರು. ನಂತರ ಎದ್ದು ನಿಲ್ಲುವಂತೆ ಹೇಳಿದರು. ನಾನು ನಿಂತ ತಕ್ಷಣ ಪೊಲೀಸ್‌ ಕಾನ್‌ಸ್ಟೆಬಲ್‌ ಬೆನ್ನಿಗೆ ಜೋರಾಗಿ ಗುದ್ದಿದ ಎಂಬುದಾಗಿ ಕುಮಾರೇಶನ್‌ ವೈದ್ಯರಿಗೆ ವಿವರಿಸಿದ‘ ಎಂದು ನವನೀತಕೃಷ್ಣನ್‌ ಮಗ ಅನುಭವಿಸಿದ ಚಿತ್ರಹಿಂಸೆಯನ್ನು ವಿವರಿಸಿದರು.

‘ಮನ ನೋಯಿಸುವ ಭಾಷೆಯನ್ನೂ ಬಳಸುವಂತಿಲ್ಲ’

ಚೆನ್ನೈ ವರದಿ: ‘ಯಾವುದೇ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದಾಗ ಅವರ ವಿರುದ್ಧ ಮನ ನೋಯಿಸುವಂಥ ಭಾಷೆಯನ್ನು ಬಳಸುವಂತಿಲ್ಲ. ಇನ್ನು ಅವರನ್ನು ಥಳಿಸುವುದು ಕಾನೂನುಬಾಹಿರ‘ ಎಂದು ಚೆನ್ನೈ ನಗರ ಪೊಲೀಸ್‌ ಕಮಿಷನರ್‌ ಎ.ಕೆ.ವಿಶ್ವನಾಥನ್‌ ಹೇಳಿದರು.

ತೂತ್ತುಕುಡಿಯಲ್ಲಿ ತಂದೆ, ಮಗ ಪೊಲೀಸ್‌ ಕಸ್ಟಡಿಯಲ್ಲಿದ್ದಾಗಲೇ ಸಾವನ್ನಪ್ಪಿದ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿಆರೋಪಿಗಳ ಬಂಧನ, ನಂತರ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.

‘ಆರೋಪಿಗಳಿಗೆ ಸಂಬಂಧಿಸಿದಂತೆ ಕೇವಲ ಮಾರ್ಗಸೂಚಿಗಳು ಮಾತ್ರವಲ್ಲ, ಸುಪ್ರೀಂಕೋರ್ಟ್‌ ಸಹ ಕಾಲಕಾಲಕ್ಕೆ ಮಹತ್ವದ ನಿರ್ದೇಶನಗಳನ್ನೂ ನೀಡಿದೆ‘ ಎಂದು ವಿಶ್ವನಾಥನ್‌ ಹೇಳಿದರು.

*
ಶಾಂತನ್‌ಕುಲಂ ಘಟನೆಗೂ ಕುಮಾರೇಶನ್‌ ಸಾವಿಗೂ ವ್ಯತ್ಯಾಸವಿಲ್ಲ. ನನ್ನ ಮಗನ ಸಾವಿಗೆ ನಮಗೆ ನ್ಯಾಯಬೇಕು.
-ನವನೀತಕೃಷ್ಣನ್‌, ಮೃತ ಕುಮಾರೇಶನ್‌ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.