ADVERTISEMENT

ಹೆಚ್ಚು ನೀರು ವ್ಯರ್ಥ: ಆರ್‌ಒ ಶುದ್ಧೀಕರಣ ನಿಷೇಧಿಸಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 19:31 IST
Last Updated 4 ಜುಲೈ 2021, 19:31 IST
ರಾಷ್ಟ್ರೀಯ ಹಸಿರು ಮಂಡಳಿ
ರಾಷ್ಟ್ರೀಯ ಹಸಿರು ಮಂಡಳಿ   

ನವದೆಹಲಿ: ಆರ್‌ಒ ನೀರು ಶುದ್ಧೀಕರಣದಲ್ಲಿ ನೀರು ಹೆಚ್ಚು ವ್ಯರ್ಥವಾಗುವುದನ್ನು ತಡೆಯುವ ಉದ್ದೇಶದಿಂದ ಶೀಘ್ರ ಕ್ರಮ ತೆಗೆದುಕೊಳ್ಳಿ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೂಚನೆ ನೀಡಿದೆ.

ಪ್ರತಿ ಲೀಟರ್‌ ನೀರಿನಲ್ಲಿ 500 ಮಿಲಿಗ್ರಾಂಗಿಂತ ಕಡಿಮೆ ಟಿಡಿಎಸ್‌ (ನೀರಿನಲ್ಲಿ ಕರಗಿದ ಘನವಸ್ತುಗಳು) ಇರುವಲ್ಲಿ ಆರ್‌ಒ ಶುದ್ಧೀಕರಣಗಳನ್ನು ನಿಷೇಧಿಸಲು ಶೀಘ್ರವೇ ಅಧಿಸೂಚನೆ ಹೊರಡಿಸಿ ಎಂದು ನ್ಯಾಯಮಂಡಳಿಯು ಸಚಿವಾಲಯಕ್ಕೆ ಸೂಚನೆ ನೀಡಿದೆ.

ಹೆಚ್ಚು ನೀರು ವ್ಯರ್ಥ ಮಾಡುವ ಆರ್‌ಒ ಶುದ್ಧೀಕರಣ ಘಟಕಗಳನ್ನು ನಿಷೇಧಿಸಲು ನಿರ್ದೇಶನ ನೀಡಿ ಎಂದು ಫ್ರೆಂಡ್ಸ್ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮಂಡಳಿಯ ಪ್ರಧಾನ ಪೀಠವು ಈ ಸೂಚನೆ ನೀಡಿದೆ. ಪ್ರತಿ ಲೀಟರ್‌ ನೀರಿನಲ್ಲಿ 500 ಮಿಲಿಗ್ರಾಂಗಿಂತ ಕಡಿಮೆ ಟಿಡಿಎಸ್ ಇರುವ ಆರ್‌ಒ ಘಟಕಗಳನ್ನು ನಿಷೇಧಿಸಿ ಎಂದು ಎನ್‌ಜಿಟಿ ಈ ಹಿಂದೆಯೇ ಸೂಚನೆ ನೀಡಿತ್ತು. ಆದರೆ ಸರ್ಕಾರವು ಕಾಲಾವಕಾಶ ಕೇಳಿತ್ತು. ಈಗ ಮುಂದಿನ ಜನವರಿ 25ರವರೆಗೆ ಒಳಗೆ ಈ ಕ್ರಮ ತೆಗೆದುಕೊಳ್ಳಿ ಎಂದು ಎನ್‌ಜಿಟಿ ಸೂಚನೆ ನೀಡಿದೆ.

ADVERTISEMENT

‘ಅಂತರ್ಜಲದಲ್ಲಿ ಟಿಡಿಎಸ್‌ನ ಪ್ರಮಾಣ ಅತ್ಯಧಿಕ ಪ್ರಮಾಣದಲ್ಲಿ ಇದ್ದಾಗ, ಅದನ್ನು ಶುದ್ಧೀಕರಿಸಲು ಆರ್‌ಒ ಘಟಕಗಳ ಅಗತ್ಯವಿದೆ. ಆದರೆ ಈ ಘಟಕಗಳು ಅತಿಹೆಚ್ಚು ಪ್ರಮಾಣದ ನೀರನ್ನು ವ್ಯರ್ಥ ಮಾಡುತ್ತವೆ. ಇಂತಹ ಶುದ್ಧೀಕರಣಗಳಿಂದ ವಾಣಿಜ್ಯ ಹಿತಾಸಕ್ತಿಯಷ್ಟೇ ಸಾಧ್ಯವಾಗುತ್ತದೆ. ಪರಿಸರಕ್ಕೆ ಹಾನಿಯಾಗುತ್ತದೆ. ಇದನ್ನು ತಪ್ಪಿಸುವ ಮಹತ್ವದ ಉದ್ದೇಶವನ್ನು ವಿಳಂಬ ನೀತಿಯ ಮೂಲಕ ಪರಿಸರ ಸಚಿವಾಲಯವು ಸೋಲಿಸುತ್ತಿದೆ’ ಎಂದು ಎನ್‌ಜಿಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ಅತಿಹೆಚ್ಚು ನೀರು ವ್ಯರ್ಥ ಮಾಡುವ ಆರ್‌ಒ ಶುದ್ಧೀಕರಣ ಘಟಕಗಳಿಗೆ ಸಾರಾಸಗಟಾಗಿ ಅನುಮತಿ ನೀಡುವುದಕ್ಕಿಂತ, ಅವು ವ್ಯರ್ಥ ಮಾಡುವ ನೀರಿನ ಪ್ರಮಾಣವನ್ನು ನಿಯಂತ್ರಿಸುವುದು ಮುಖ್ಯ. ಇದಕ್ಕಾಗಿ ಜಲ ಸಂಪನ್ಮೂಲ ಇಲಾಖೆಗಳು, ಪಾಲಿಕೆಗಳು ಮುಂದಾಗಬೇಕು. ಆ ಮೂಲಕ ಭಾರಿ ಪ್ರಮಾಣದಲ್ಲಿ ಅನಗತ್ಯವಾಗಿ ನೀರು ವ್ಯರ್ಥವಾಗುವುದನ್ನು ತಪ್ಪಿಸಬಹುದು’ ಎಂದು ಎನ್‌ಜಿಟಿ ಅಭಿಪ್ರಾಯಪಟ್ಟಿದೆ.

*
ಆರ್‌ಒ ಶುದ್ಧೀಕರಣ ಘಟಕಗಳು ಕನಿಷ್ಠ ಶೇ 60ರಷ್ಟು ನೀರನ್ನು ಶುದ್ಧೀಕರಿಸಿಕೊಡಬೇಕು. ಆ ಮೂಲಕ ನೀರು ಅನಗತ್ಯವಾಗಿ ವ್ಯರ್ಥವಾಗುವುದನ್ನು ತಡೆಯಬಹುದು.
-ಎನ್‌ಜಿಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.