ADVERTISEMENT

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶೌಚಾಲಯವೇ ಶಿಶುಪಾಲನಾ ಕೇಂದ್ರ!

ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್‌ ಸಿನ್ಹಾ ಕ್ರಮಕ್ಕೆ ಸೂಚನೆ

ಪಿಟಿಐ
Published 3 ಸೆಪ್ಟೆಂಬರ್ 2018, 13:52 IST
Last Updated 3 ಸೆಪ್ಟೆಂಬರ್ 2018, 13:52 IST

ಶ್ರೀನಗರ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶೌಚಾಲಯವನ್ನೇ ಶಿಶುಪಾಲನಾ ಕೊಠಡಿಯಾಗಿ ಪರಿವರ್ತಿಸಿರುವ ಆರೋಪದ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್‌ ಸಿನ್ಹಾ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ನಿರ್ದೇಶನ ನೀಡಿದ್ದಾರೆ.

ಅವಿನಾಶ್‌ ಕೌಲ್‌ ಎಂಬುವವರು ಕೊಳಕಾಗಿರುವ ಶಿಶುಪಾಲನಾ ಕೊಠಡಿಯ ಚಿತ್ರವನ್ನು ಕೇಂದ್ರ ಸಚಿವರಾದ ಸುರೇಶ್‌ ಪ್ರಭು ಮತ್ತು ಜಯಂತ್‌ ಸಿನ್ಹಾ ಅವರಿಗೆ ಭಾನುವಾರ ಟ್ವಿಟ್‌ ಮಾಡಿ, ಶಿಶುಪಾಲನಾ ಕೇಂದ್ರದ ಅವ್ಯವಸ್ಥೆ ತೆರೆದಿಟ್ಟಿದ್ದರು.

ಈ ಬಗ್ಗೆ ತಕ್ಷಣ ಗಮನ ಹರಿಸುವಂತೆ ಸಚಿವರು, ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ADVERTISEMENT

‘ಜಮ್ಮು ಮತ್ತು ಕಾಶ್ಮೀರದ ವಿಮಾನ ನಿಲ್ದಾಣದಲ್ಲಿ ಶೌಚಾಲಯವನ್ನೇ ಮಕ್ಕಳ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಕೊಠಡಿ ಕೊಳಕಾಗಿದ್ದು, ದುರ್ವಾಸನೆ ಬೀರುತ್ತಿದೆ. ಇದು ಮಕ್ಕಳ ಆರೋಗ್ಯ ಹದಗೆಡಿಸುವಂತಿದೆ. ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಕೌಲ್‌ ಅವರು ಟ್ವೀಟ್‌ನಲ್ಲಿ ಮನವಿ ಮಾಡಿದ್ದರು.

‘ಎಲ್ಲ ವಿಮಾನಯಾನ ಸಂಸ್ಥೆಗಳು ಶಿಶುಗಳಿಗೆ ಸುಮಾರು ₹1,500 ಪ್ರಯಾಣ ವೆಚ್ಚ ವಿಧಿಸುತ್ತಿವೆ. ಆದರೆ, ಸರಿಯಾದ ಸೇವೆ ಒದಗಿಸುತ್ತಿಲ್ಲ. ಯಾವ್ಯಾವ ವಿಮಾನ ನಿಲ್ದಾಣಗಳಲ್ಲಿ ಶಿಶುಪಾಲನ ಕೊಠಡಿಗಳಿಲ್ಲವೋ ಅಂತಹ ಕಡೆಗಳಲ್ಲಿ ಶಿಶುಪಾಲನಾ ಕೊಠಡಿಗಳನ್ನು ಕಲ್ಪಿಸಬೇಕು. ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.