ADVERTISEMENT

ಕೇಂದ್ರದ 11 ಸಚಿವರ ಟ್ವೀಟ್‌ಗೆ ‘ತಿರುಚಿದ ಮಾಹಿತಿ’ ಹಣೆಪಟ್ಟಿ ಅಂಟಿಸಿ: ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 25 ಮೇ 2021, 20:52 IST
Last Updated 25 ಮೇ 2021, 20:52 IST
   

ನವದೆಹಲಿ: ಪ್ರಧಾನಿ ನ‌ರೇಂದ್ರ ಮೋದಿ ಅವರ ವರ್ಚಸ್ಸು ಕುಗ್ಗಿಸುವುದಕ್ಕಾಗಿ ಕಾಂಗ್ರೆಸ್‌ ಪಕ್ಷವು ಸಿದ್ಧಪಡಿಸಿದೆ ಎಂದು ಬಿಜೆಪಿ ಆರೋಪಿಸುತ್ತಿರುವ ಟೂಲ್‌ಕಿಟ್‌ ವಿವಾದವು ಸದ್ಯಕ್ಕೆ ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ಈ ಟೂಲ್‌ಕಿಟ್‌ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಕೇಂದ್ರದ 11 ಸಚಿವರ ಟ್ವೀಟ್‌ಗಳಿಗೆ ‘ತಿರುಚಿದ ಟ್ವೀಟ್‌’ ಎಂಬ ಹಣೆಪಟ್ಟಿ ಅಂಟಿಸಬೇಕು ಎಂದು ಕಾಂಗ್ರೆಸ್‌ ಪಕ್ಷವು ಟ್ವಿಟರ್‌ಗೆ ಪತ್ರ ಬರೆದು ಕೋರಿದೆ.

ಟ್ವಿಟರ್‌ನ ಕಾನೂನು, ನೀತಿ, ವಿಶ್ವಾಸ ಮತ್ತು ಸುರಕ್ಷತೆ ವಿಭಾಗದ ಮುಖ್ಯಸ್ಥೆ ವಿಜಯಾ ಗಡ್ಡೆ ಮತ್ತು ಕಾನೂನು ವಿಭಾಗದ ಉಪಾಧ್ಯಕ್ಷ ಜಿಮ್‌ ಬೇಕರ್‌ ಅವರಿಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಪತ್ರ ಬರೆದಿದ್ದಾರೆ. ಪ್ರಲ್ಹಾದ ಜೋಶಿ, ಸ್ಮೃತಿ ಇರಾನಿ, ಪೀಯೂಷ್‌ ಗೋಯಲ್ ಸೇರಿ ಕೇಂದ್ರದ 11 ಸಚಿವರು ಸುಳ್ಳು ಮತ್ತು ತಿರುಚಿದ ದಾಖಲೆಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ. ರವಿಶಂಕರ್‌ ಪ್ರಸಾದ್‌, ಗಿರಿರಾಜ್‌ ಸಿಂಗ್‌, ಧರ್ಮೇಂದ್ರ ಪ್ರಧಾನ್‌, ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌, ತಾವರಚಂದ್‌ ಗೆಹ್ಲೋಟ್‌, ಹರ್ಷವರ್ಧನ್‌, ಮುಕ್ತಾರ್‌ ಅಬ್ಬಾಸ್‌ ನಖ್ವಿ, ಗಜೇಂದ್ರ ಸಿಂಗ್‌ ಶೆಖಾವತ್‌ ಅವರ ಹೆಸರನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಎಲ್ಲ ಮುಖಂಡರು ‘ತಿರುಚಿದ ಮತ್ತು ಸುಳ್ಳು ಮಾಹಿತಿ’ಯನ್ನು ಹಂಚಿಕೊಂಡಿದ್ದಾರೆ. ‘ಕಾಂಗ್ರೆಸ್‌–ಟೂಲ್‌ಕಿಟ್‌–ಎಕ್ಸ್‌ಪೋಸ್ಡ್‌’ ಹ್ಯಾಷ್‌ಟ್ಯಾಗ್‌ನಲ್ಲಿ ಈ ಮುಖಂಡರು ಹಂಚಿಕೊಂಡ ಅದೇ ಮಾಹಿತಿಯನ್ನು ‘ತಿರುಚಿದ ಮಾಹಿತಿ’ ಎಂದು ಟ್ವಿಟರ್‌ ಈಗಾಗಲೇ ಗುರುತಿಸಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಮತ್ತು ಪ‍್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ‘ಕಾಂಗ್ರೆಸ್ ಟೂಲ್‌ಕಿಟ್‌’ ಟ್ವೀಟ್‌ಗಳಿಗೆ ‘ತಿರುಚಿದ ಮಾಹಿತಿ’ ಎಂಬ ಹಣೆಪಟ್ಟಿಯನ್ನು ಟ್ವಿಟರ್‌ ಅಂಟಿಸಿತ್ತು.

ಹಾಗಾಗಿ, ಇಲ್ಲಿ ಉಲ್ಲೇಖಿಸಲಾದ ಮುಖಂಡರ ಟ್ವೀಟ್‌ಗಳಿಗೆ ಕೂಡ ಅದೇ ಹಣೆಪಟ್ಟಿ ಅಂಟಿಸುವುದು ಸರಿಯಾದ ಕ್ರಮವಾಗುತ್ತದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

ಅನುಚಿತ ಲಾಭ ಮತ್ತು ರಾಜಕೀಯ ಪ್ರಯೋಜನ ಪಡೆಯುವುದಕ್ಕಾಗಿ ಬಿಜೆಪಿಯ ಕೆಲವು ಮುಖಂಡರು ಈ ಟೂಲ್‌ಕಿಟ್‌ ಅನ್ನು ಸಿದ್ಧಪಡಿಸಿದ್ದಾರೆ. ಕಾಂಗ್ರೆಸ್‌ ಪಕ್ಷ ಮತ್ತು ಅದರ ನಾಯಕರ ಹೆಸರು ಕೆಡಿಸುವುದಕ್ಕಾಗಿ ಅಪಾಯಕಾರಿಯಾದ ಸುಳ್ಳನ್ನು ಪಸರಿಸಿದ್ದಾರೆ ಎಂದು ಅವರು ದೂರಿದ್ದಾರೆ.

ಟ್ವಿಟರ್‌ ವಿರುದ್ಧ ಪೊಲೀಸರು ಕೈಗೊಂಡಿರುವ ಕ್ರಮವನ್ನು ಟೀಕಿಸಿರುವ ಸುರ್ಜೇವಾಲಾ ಅವರು, ‘ತಪ್ಪಿತಸ್ಥರು’ ‘ಮುಗ್ಧರ’ ಮೇಲೆ ನಡೆಸುತ್ತಿರುವ ಹಿಮ್ಮುಖ ತನಿಖೆ ಇದು ಎಂದಿದ್ದಾರೆ.

ಕಾಂಗ್ರೆಸ್‌ ಮುಖಂಡರಿಗೆ ನೋಟಿಸ್‌
ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಹಾಜರಾಗಬೇಕು ಎಂದು ಕಾಂಗ್ರೆಸ್‌ ವಕ್ತಾರ ರಾಜೀವ್‌ ಗೌಡ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ರೋಹನ್‌ ಗುಪ್ತಾ ಅವರಿಗೆ ನೋಟಿಸ್‌ ನೀಡಿರುವುದು ನಿಜ ಎಂದು ದೆಹಲಿ ಪೊಲೀಸರು ಮಂಗಳವಾರ ಖಚಿತಪಡಿಸಿದ್ದಾರೆ.

‘ಇವು ಹೊಸ ನೋಟಿಸ್‌ ಅಲ್ಲ. 8–9 ದಿನ ಮೊದಲೇ ಈ ನೋಟಿಸ್‌ ನೀಡಲಾಗಿದೆ. ಕಾಂಗ್ರೆಸ್‌ ಪಕ್ಷವು ನೀಡಿದ ದೂರಿನ ಆಧಾರದಲ್ಲಿ ನೋಟಿಸ್‌ ನೀಡಲಾಗಿದ್ದು, ತನಿಖೆಯನ್ನು ಮುಂದಕ್ಕೆ ಒಯ್ಯಲು ಅವರಿಂದ ಮಾಹಿತಿ ಪಡೆಯುವುದು ಅಗತ್ಯವಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಪೊಲೀಸ್‌ನ ವಿಶೇಷ ಸೈಬರ್‌ ವಿಭಾಗವು ತನಿಖೆ ನಡೆಸುತ್ತಿದೆ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇದ್ದು, ಎಫ್‌ಐಆರ್‌ ದಾಖಲಾಗಿಲ್ಲ.

***

ಅಪರಾಧ ಎಸಗಿದವರು, ನಕಲಿ ಟೂಲ್‌ಕಿಟ್‌ ಪ್ರಕಟಿಸಿದವರೂ ಬಿಜೆಪಿ ಮುಖಂಡರು. ಬಿಜೆಪಿ ಕಚೇರಿ ಮೇಲೆ ದಾಳಿ ಆಗಬೇಕಿತ್ತು, ಆದರೆ ಟ್ವಿಟರ್‌ ಕಚೇರಿ ಮೇಲೆ ದಾಳಿ ಆಗಿದೆ.
-ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.