ADVERTISEMENT

ಟೂಲ್ ಕಿಟ್ ಪ್ರಕರಣ: ನಿಕಿತಾ ಜಾಮೀನು ಅರ್ಜಿ ಪ್ರತಿಕ್ರಿಯೆಗೆ ಸಮಯ ನೀಡಿದ ನ್ಯಾಯಾಲಯ

ಪಿಟಿಐ
Published 2 ಮಾರ್ಚ್ 2021, 7:12 IST
Last Updated 2 ಮಾರ್ಚ್ 2021, 7:12 IST
ನಿಕಿತಾ ಜಾಕೊಬ್‌
ನಿಕಿತಾ ಜಾಕೊಬ್‌   

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ‘ಟೂಲ್‌ ಕಿಟ್‌‘ ಹಂಚಿದ ಪ್ರಕರಣದ ಸಹ ಆರೋಪಿ ನಿಕಿತಾ ಜೇಕಬ್‌‌ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡಲು ದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಪೊಲೀಸರಿಗೆ ಒಂದು ವಾರ ಕಾಲಾವಕಾಶ ನೀಡಿದೆ.

ನಿಕಿತಾ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸುವ ವೇಳೆ, ‘ಜೇಕಬ್‌‌ ಅವರು ಸಲ್ಲಿಸಿರುವ ಮನವಿಗೆ ವಿವರವಾದ ಉತ್ತರ ನೀಡಲು ತನಿಖಾ ಸಂಸ್ಥೆಗೆ ಸಮಯ ಬೇಕಾಗುತ್ತದೆ‘ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಮಾರ್ಚ್ 9ರವರೆಗೆ ಕಾಲಾವಕಾಶ ನೀಡಿ ಆದೇಶಿಸಿದರು. ಇದೇ ದಿನ, ಈ ಪ್ರಕರಣದ ಮತ್ತೊಬ್ಬ ಸಹ ಆರೋಪಿ ಶಾಂತನು ಮುಲುಕ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.

ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ವಿಚಾರಣೆ ವೇಳೆ, ಜೇಕಬ್‌ ಪರವಾಗಿ ಹಾಜರಾದ ಹಿರಿಯ ವಕೀಲೆ ರೆಬೆಕಾ ಜಾನ್, ‘ನಾನು ಇಲ್ಲಿ ಜೇಕಬ್‌ ಪರ ವಾದ ಮಾಡುತ್ತಿದ್ದೇನೆಯೇ ಹೊರತು ಶಾಂತನು ಮುಲುಕ್‌ ಪರ ಅಲ್ಲ‘ ಎಂದು ಸ್ಪಷ್ಟಪಡಿಸಿದರು.

ADVERTISEMENT

ನ್ಯಾಯಾಲಯ, ಮಾರ್ಚ್‌ 9ರಂದು ರೆಬೆಕಾ ಅವರು ತಮ್ಮ ವಾದ ಮಂಡಿಸಬಹುದು ಎಂದು ಹೇಳಿತು. ಹಾಗೆಯೇ, ಜೇಕಬ್‌ ನಿರೀಕ್ಷಣಾ ಜಾಮೀನು ಅರ್ಜಿ ಕುರಿತು ಪೊಲೀಸರು ನ್ಯಾಯಾಲಯಕ್ಕೆ ನೀಡುವ ಪ್ರತಿಕ್ರಿಯೆಯ ಒಂದು ಪ್ರತಿಯನ್ನು, ಅವರ ಪರ ವಕೀಲರಿಗೆ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.