ADVERTISEMENT

Toolkit |11 ಸಚಿವರ ಟ್ವೀಟ್‌ಗೆ 'ತಿರುಚಿದ ಮಾಧ್ಯಮ'ದ ಮುದ್ರೆ ಹಾಕಿ: ಕಾಂಗ್ರೆಸ್‌

ಏಜೆನ್ಸೀಸ್
Published 25 ಮೇ 2021, 10:21 IST
Last Updated 25 ಮೇ 2021, 10:21 IST
ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲ
ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲ   

ನವದೆಹಲಿ: ಕಾಂಗ್ರೆಸ್‌ ವಿರುದ್ಧ ಸುಳ್ಳು ಮಾಹಿತಿ ಹರಡುತ್ತಿರುವ, ಅಪಪ್ರಚಾರ ಮಾಡುತ್ತಿರುವ ಕೇಂದ್ರ ಸಚಿವರ ಟ್ವೀಟ್‌ಗಳಿಗೆ 'ತಿರುಚಿದ ಮಾಧ್ಯಮ' ಎಂಬ ಮುದ್ರೆ ಹಾಕಬೇಕು ಎಂದು ಕಾಂಗ್ರೆಸ್‌ ಟ್ವಿಟರ್‌ ಸಂಸ್ಥೆಯನ್ನು ಮಂಗಳವಾರ ಆಗ್ರಹಿಸಿದೆ.

ಟ್ವಿಟರ್‌ನ 'ಕಾನೂನು, ನೀತಿ ಮತ್ತು ಸುರಕ್ಷಾ ವಿಭಾಗ'ದ ಮುಖ್ಯಸ್ಥ ವಿಜಯಾ ಗದ್ದೆ ಮತ್ತು ಕಾನೂನು ವಿಭಾಗದ ಉಪಾಧ್ಯಕ್ಷ ಜಿಮ್‌ ಬೇಕರ್‌ ಅವರಿಗೆ ಈ ವಿಚಾರವಾಗಿ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲ ಅವರು ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ನ ವಿರುದ್ಧ ನಕಲಿ ದಾಖಲೆ ಮತ್ತು ಸುಳ್ಳು ಮಾಹಿತಿ ಹರಡುತ್ತಿರುವ ಆರೋಪದ ಮೇಲೆ 11 ಕೇಂದ್ರ ಸಚಿವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ವಕ್ತಾರರೂ ಆದಸುರ್ಜೇವಾಲ ಅವರು ಕೋರಿದ್ದಾರೆ.

ADVERTISEMENT

ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌, ಪೀಯೂಷ್‌ ಗೊಯಲ್‌, ಸ್ಮೃತಿ ಇರಾನಿ, ರವಿಶಂಕರ ಪ್ರಸಾದ್‌, ಪ್ರಲ್ಹಾದ್‌ ಜೋಶಿ, ಧರ್ಮೇಂದ್ರ ಪ್ರಧಾನ್‌, ರಮೇಶ್‌ ಪೋಕ್ರಿಯಾಲ್‌, ತಾವರ್‌ಚೆಂದ್‌ ಗೆಹ್ಲೋಟ್‌, ಹರ್ಷವರ್ಧನ್‌, ಮುಕ್ತಾರ್‌ ಅಬ್ಬಾಸ್‌ ನಕ್ವಿ, ಗಜೇಂದ್ರ ಸಿಂಗ್‌ ಶೇಕಾವತ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಆಗ್ರಹಿಸಿದೆ.

ತಿರುಚಿದ, ಕಲ್ಪಿತ ವಿಷಯಗಳು ಮತ್ತು #CongressToolkitExposed ಹ್ಯಾಷ್‌ ಟ್ಯಾಗ್‌ ಅಡಿಯಲ್ಲಿ ಮಾಡಿರುವ ಟ್ವೀಟ್‌ಗಳಿಗೆ ಈಗಾಗಲೇ 'ತಿರುಚಿದ ಮಾಧ್ಯಮ' ಎಂಬ ಮುದ್ರೆಯನ್ನು ಟ್ವಿಟರ್‌ ಹಾಕಿದೆ. ಕಾಂಗ್ರೆಸ್ ಮತ್ತು ಅದರ ನಾಯಕರ ವಿರುದ್ಧ ಟ್ವಿಟ್ಟರ್ ಅನ್ನು ಬಳಸಿಕೊಂಡು ಸುಳ್ಳು ಮಾಹಿತಿ ಹರಡುವ ಮೂಲಕ ರಾಜಕೀಯ ಲಾಭ ಪಡೆಯಲು ಕೆಲವು ಬಿಜೆಪಿ ನಾಯಕರೇ 'ಟೂಲ್‌ಕಿಟ್' ಎಂಬ ವಿಷಯ ಸೃಷ್ಟಿ ಮಾಡಿದ್ದಾರೆ ಎಂದು ಸುರ್ಜೇವಾಲ ಆರೋಪಿಸಿದ್ದಾರೆ.

'ಭಾರತ ಸರ್ಕಾರದ ಸಚಿವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ನೇರವಾಗಿ ಒದಗಿಸುವ ಮಾಹಿತಿಯನ್ನು ಜನ ನಿಜ ಎಂದು ನಂಬುತ್ತಾರೆ. ಆದ್ದರಿಂದ ಟೂಲ್‌ಕಿಟ್‌ ವಿಷಯದ ಅಡಿಯಲ್ಲಿ ಟ್ವಿಟರ್‌ನಲ್ಲಿ ಕೇಂದ್ರ ಸಚಿವರು ಮಾಡಿರುವ ಟ್ವೀಟ್‌ಗಳಿಗೆ 'ತಿರುಚಿದ ಮಾಧ್ಯಮ' ಎಂಬ ಮುದ್ರೆ ಹಾಕುವುದು ಅಗತ್ಯವಾಗಿದೆ ಎಂದು ಸುರ್ಜೇವಾಲ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.