
ನವದೆಹಲಿ: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಟಾಪ್ ಕ್ಲಾಸ್ ಸ್ಕಾಲರ್‌ಶಿಪ್ ಯೋಜನೆ’ಯ ಪರಿಷ್ಕೃತ ಮಾರ್ಗಸೂಚಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಒಟ್ಟು ಮೊತ್ತವನ್ನು ₹ 2 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ವಿದ್ಯಾರ್ಥಿಗಳು ಪಾವತಿಸುವ ಬೋಧನಾ ಶುಲ್ಕ ಮತ್ತು ಮರು ಪಾವತಿಸಲಾಗದ ಶುಲ್ಕಗಳನ್ನು ಈ ಯೋಜನೆಯಡಿ ವಿದ್ಯಾರ್ಥಿಗಳ ಖಾತೆಗೆ ನೇರ ನಗದು ವರ್ಗಾವಣೆ ವ್ಯವಸ್ಥೆಯಡಿ ಸಂದಾಯ ಮಾಡಲಾಗುತ್ತದೆ.
ಯೋಜನೆಯು, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ. ಯೋಜನೆಯಡಿಯಲ್ಲಿ ಬೋಧನಾ ಶುಲ್ಕವನ್ನು ಭರಿಸಲಾಗುತ್ತದೆ ಮತ್ತು ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭತ್ಯೆಯನ್ನು ನೀಡಲಾಗುತ್ತದೆ.
ಪರಿಷ್ಕೃತ ನಿಯಮಗಳು
ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಬೋಧನಾ ಶುಲ್ಕ ಮತ್ತು ಮರುಪಾವತಿಸಲಾಗದ ಶುಲ್ಕವನ್ನು ವರ್ಗಾಯಿಸುತ್ತದೆ
ಶೈಕ್ಷಣಿಕ ಭತ್ಯೆಯಾಗಿ ಮೊದಲ ವರ್ಷ ₹86,000 ಮತ್ತು ನಂತರ ವರ್ಷಗಳಲ್ಲಿ ₹41,000 ನೀಡಲಾಗುತ್ತದೆ
ಈ ಯೋಜನೆಯ ಫಲಾನುಭವಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಇತರ ವಿದ್ಯಾರ್ಥಿ ವೇತನ ಯೋಜನೆಗಳ ಅನುಕೂಲ ಪಡೆಯುವಂತಿಲ್ಲ
ಐಐಟಿ, ಐಐಎಂಎಸ್, ಏಮ್ಸ್, ಎನ್‌ಐಟಿ, ಎನ್‌ಎಎಫ್‌ಟಿ, ಎನ್‌ಐಡಿ ಮತ್ತಿತರ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆದ, ಕುಟುಂಬದ ವಾರ್ಷಿಕ ವರಮಾನ ₹8 ಲಕ್ಷದ ಒಳಗಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದು
ಲೆಕ್ಕಪರಿಶೋಧನೆ ಮತ್ತು ಮೇಲುಸ್ತುವಾರಿ ಸಮಿತಿಯ ಮೇಲ್ವಿಚಾರಣೆಗೆ ಅವಕಾಶ
ಸತತ ಮೂರು ವರ್ಷಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಸಲ್ಲಿಸದ ಸಂಸ್ಥೆಯನ್ನು ಯೋಜನೆಯಿಂದ ಹೊರಗಿಡಲಾಗುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.