ADVERTISEMENT

ಜಮ್ಮು: ಭದ್ರತಾ ಪಡೆಯೊಂದಿಗಿನ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತ

ಪಿಟಿಐ
Published 19 ಜುಲೈ 2021, 6:17 IST
Last Updated 19 ಜುಲೈ 2021, 6:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್‌ ಎ ತಯಬಾ(ಎಲ್‌ಇಟಿ) ಸಂಘಟನೆಯ ಕಮಾಂಡರ್‌ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದಾರೆ’ ಎಂದು ಪೊಲೀಸರು ಸೋಮವಾರ ತಿಳಿಸಿದರು.

‘ದಕ್ಷಿಣ ಕಾಶ್ಮೀರದ ಚೆಕ್‌ ಸಾದಿಕ್‌ ಖಾನ್‌ ಪ್ರದೇಶದಲ್ಲಿ ಉಗ್ರರು ಇರುವ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಭಾನುವಾರ ರಾತ್ರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಉಗ್ರರು ಮೊದಲು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಭದ್ರತಾ ಪಡೆಯೂ ಪ್ರತ್ಯುತ್ತರ ನೀಡಿದೆ. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಮೃತ ಉಗ್ರರಲ್ಲಿ ಒಬ್ಬನನ್ನು ಎಲ್‌ಇಟಿಯ ಉನ್ನತ ಕಮಾಂಡರ್‌ ಇಶ್ಪಾಕ್‌ ದರ್‌ ಅಲಿಯಾಸ್‌ ಅಬು ಅಕ್ರಂ ಎಂದು ಗುರುತಿಸಲಾಗಿದೆ. ಈತ 2017ರಿಂದ ಸಕ್ರಿಯನಾಗಿದ್ದು, ಪೊಲೀಸ್‌, ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಹತ್ಯೆ ಸೇರಿದಂತೆ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ. ಇನ್ನೊಬ್ಬ ಉಗ್ರನನ್ನು ಮಜೀದ್‌ ಇಕ್ಬಾಲ್‌ ಎಂದು ಗುರುತಿಸಲಾಗಿದೆ.’ ಎಂದು ಡಿಜಿಪಿ ದಿಲ್ಬಾಗ್‌ ಸಿಂಗ್‌ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.