
ಲಖನೌ: ಬುಧವಾರ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ರೈಲು ಹಳಿ ದಾಟುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ. ಪ್ರತ್ಯೇಕ ರೈಲಿನಿಂದ ಇಳಿದು ಪ್ರಯಾಣಿಕರು ಹಳಿ ದಾಟುತ್ತಿದ್ದರು ಎಂದು ತಿಳಿದುಬಂದಿದೆ.
ಚುನಾರ್ ಜಂಕ್ಷನ್‌ನಲ್ಲಿ ಪ್ಲಾಟ್‌ಫಾರ್ಮ್ ಎದುರು ಬದಿಯಲ್ಲಿರುವ ಚೋಪನ್-ಪ್ರಯಾಗರಾಜ್ ಎಕ್ಸ್‌ಪ್ರೆಸ್‌ನಿಂದ ಸಂತ್ರಸ್ತರು ಇಳಿದಿದ್ದರು. ಬಳಿಕ, ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿದ್ದಾಗ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಹೌರಾ-ಕಲ್ಕಾ ನೇತಾಜಿ ಎಕ್ಸ್‌ಪ್ರೆಸ್ ಎಂಬ ಮತ್ತೊಂದು ರೈಲು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಎನ್‌ಸಿಆರ್ ಪ್ರಯೋಗ್‌ರಾಜ್ ವಿಭಾಗದ ಪಿಆರ್‌ಒ ಅಮಿತ್ ಸಿಂಗ್ ತಿಳಿಸಿದ್ದಾರೆ.
ಮೃತರು ಪ್ಲಾಟ್‌ಫಾರ್ಮ್ ಬದಿಯಲ್ಲಿ ಇಳಿಯಬೇಕಿತ್ತು. ಆದರೆ, ಅವರು ಹಳಿಗಳನ್ನು ದಾಟಿ ಆ ಕಡೆ ತೆರಳಲು ಹಳಿ ಇರುವ ಕಡೆ ಇಳಿದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ್ರಸ್ತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ, ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸಲು ನಿರ್ದೇಶಿಸಿದ್ದಾರೆ.
ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಅಪಘಾತದ ಸ್ಥಳಕ್ಕೆ ತೆರಳಲು ಆದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.