ADVERTISEMENT

ಕ್ರಿಶಕ್ ಎಕ್ಸ್‌ಪ್ರೆಸ್‌ನಲ್ಲಿ ಕೊಳಕು ಹೊದಿಕೆ ಪೂರೈಕೆ: ಪ್ರಯಾಣಿಕರು ಅಸ್ವಸ್ಥ

ಏಜೆನ್ಸೀಸ್
Published 11 ಜನವರಿ 2023, 16:01 IST
Last Updated 11 ಜನವರಿ 2023, 16:01 IST
   

ಲಖನೌ: ನಗರದಿಂದ ವಾರಾಣಸಿಯತ್ತ ಹೊರಟ್ಟಿದ್ದ ಕ್ರಿಶಕ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕೊಳಕಾದ ಹೊದಿಕೆಗಳನ್ನು ಪೂರೈಸಿದ್ದರಿಂದ ಕೆಲವು ಪ್ರಯಾಣಿಕರು ಅಸ್ವಸ್ಥಗೊಂಡ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರೈಲು ಸಂಖ್ಯೆ 15008 ರಲ್ಲಿ ನೀಡಲಾಗಿದ್ದ ಹೊದಿಕೆ ಬಳಸಿದ ಮೂವರು ಪ್ರಯಾಣಿಕರು ಅನಾರೋಗ್ಯಕ್ಕೆ ತುತ್ತಾದರು. ರೈಲು ಲಖನೌ ಜಂಕ್ಷನ್‌ನಿಂದ ಹೊರಡುವ ಹಂತದಲ್ಲಿದ್ದಾಗ ಹವಾನಿಯಂತ್ರಿತ ಕೋಚ್‌ನಲ್ಲಿದ್ದ ಪ್ರಯಾಣಿಕರು ಹೊದಿಕೆಗಳಿಂದ ದುರ್ವಾಸನೆಯಿಂದ ಬರುತ್ತಿದೆ ಎಂದು ದೂರಿದರು. ತಕ್ಷಣ ಹೊದಿಕೆ ಬದಲಾಯಿಸಲಾಗಿತ್ತು. ಆದರೆ ರೈಲು ಬಾದಶಹನಗರದ ನಿಲ್ದಾಣಕ್ಕೆ ಬರುತ್ತಿದ್ದಂತೆ ಕೆಲವು ಪ್ರಯಾಣಿಕರು ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾದಶಹನಗರ ರೈಲು ನಿಲ್ದಾಣದಲ್ಲಿ ಅರ್ಧ ಗಂಟೆ ರೈಲನ್ನು ನಿಲ್ಲಿಸಿ, ವೈದ್ಯರ ತಂಡ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿತು. ಸ್ಥಳಕ್ಕೆ ಆಗಮಿಸಿದ ತಂಡ, ಅನಾರೋಗ್ಯಕ್ಕೆ ತುತ್ತಾದ ಮೂವರು ಪ್ರಯಾಣಿಕರ ತಪಾಸಣೆ ನಡೆಸಿತು. ಹೊದಿಕೆಯ ದುರ್ವಾಸನೆಯಿಂದಾಗಿ ವಾಕರಿಕೆ ಬರಲಾರಂಭಿಸಿತು ಎಂದು ಪ್ರಯಾಣಿಕರು ವೈದ್ಯರ ತಂಡಕ್ಕೆ ಮಾಹಿತಿ ನೀಡಿದರು.

ADVERTISEMENT

ಪ್ರಯಾಣಿಕರೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಲು ನಿರಾಕರಿಸಿದರು. ಅಗತ್ಯ ಔಷಧೋಪಚಾರದ ಬಳಿಕ ಪ್ರಯಾಣಿಕರು ಪೂರ್ತಿ ಚೇತರಿಸಿಕೊಂಡಿದ್ದರಿಂದ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು.

ಈ ಘಟನೆಗೆ ಸಂಬಂಧಿಸಿದಂತೆ ಪ್ರಯಾಣಿಕರೊಬ್ಬರು ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.