ADVERTISEMENT

ಉತ್ತರ ಪ್ರದೇಶ ಸರ್ಕಾರಿ ಜಾಹೀರಾತಿನಲ್ಲಿ ಬಂಗಾಳ ಅಭಿವೃದ್ಧಿ ತೋರಿಸಿದ ಸಿಎಂ ಯೋಗಿ!

ಟಿಎಂಸಿ ಸೇರಿದಂತೆ ವಿಪಕ್ಷಗಳ ಕುಹಕ

ಪಿಟಿಐ
Published 12 ಸೆಪ್ಟೆಂಬರ್ 2021, 12:02 IST
Last Updated 12 ಸೆಪ್ಟೆಂಬರ್ 2021, 12:02 IST
ಯೋಗಿ ಆದಿತ್ಯನಾಥ್ ಅವರು ನೀಡಿರುವ ಜಾಹೀರಾತು
ಯೋಗಿ ಆದಿತ್ಯನಾಥ್ ಅವರು ನೀಡಿರುವ ಜಾಹೀರಾತು   

ಲಕ್ನೋ: ಉತ್ತರ ಪ್ರದೇಶ ಸರ್ಕಾರ ತನ್ನ ಸಾಧನೆ ಬಿಂಬಿಸಲು ಪತ್ರಿಕೆಗಳಿಗೆ ನೀಡಿರುವ ಸರ್ಕಾರಿ ಜಾಹೀರಾತು ವಿವಾದದ ಕಿಡಿ ಹೊತ್ತಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಅಭಿವೃದ್ಧಿಯ ಬಗ್ಗೆ ಹೇಳಿರುವ ಮಾಹಿತಿಯೊಡನೆ ಹಿನ್ನೆಲೆಯಲ್ಲಿ ಗಗನಚುಂಬಿ ಕಟ್ಟಡ ಹಾಗೂ ಮೇಲ್ಸೆತುವೆಗಳ ಚಿತ್ರವನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಭಾನುವಾರ ಪ್ರಕಟ ಮಾಡಲಾಗಿತ್ತು.

ಇದರಲ್ಲಿ ಪ್ರಕಟವಾಗಿರುವ ಮೇಲ್ಸೆತುವೆ ಚಿತ್ರ ಕೋಲ್ಕತ್ತದಲ್ಲಿ ನಿರ್ಮಾಣವಾಗಿರುವ ಮೇಲ್ಸೆತುವೆ ಎನ್ನಲಾಗಿದ್ದು, ಯೋಗಿ ಅವರನ್ನು ಹಣೆಯಲು ಅನೇಕ ನೆಟ್ಟಿಗರು ಈ ಜಾಹೀರಾತನ್ನು ಬಳಸಿಕೊಂಡಿದ್ದಾರೆ.

ADVERTISEMENT

ಈ ಬಗ್ಗೆ ಟ್ವೀಟ್ ಮಾಡಿರುವ ಟಿಎಂಸಿ ನಾಯಕ ಮುಕುಲ್ ರಾಯ್, ‘ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವುದನ್ನು ಬಿಟ್ಟರೆ, ಮೋದಿ ಬಳಿ ಅವರ ಪಕ್ಷವನ್ನು ಉಳಿಸುವ ಯಾವುದೇ ಅಸ್ತ್ರ ಇಲ್ಲ. ಅವರು ಅಷ್ಟೊಂದು ಅಸಹಾಯಕರಾಗಿದ್ದಾರೆ. ಮಮತಾ ಅವರ ಸಾಧನೆಯನ್ನು ತಮ್ಮ ಸಾಧನೆ ಎಂದು ಹೇಳಿಕೊಂಡು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ನೋಡುತ್ತಿದ್ದೀರಾ ಮೋದಿ ಹಾಗೂ ಆದಿತ್ಯನಾಥ್ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.

ಟಿಎಂಸಿ ನಾಯಕಿ ಮಹುವಾ ಮೋಯಿತ್ರಾ ಕೂಡ ಯೋಗಿ ಆದಿತ್ಯನಾಥ್ ಅವರ ಕಾಲೆಳಿದಿದ್ದು, ‘ನಮ್ಮ ಸಾಧನೆಯನ್ನು ನಿಮ್ಮ ಸಾಧನೆ ಎಂದು ಹೇಳಿಕೊಳ್ಳಲು ನಿಮಗೆ ನಾಚಿಕೆಯಾಗುವುದಿಲ್ಲವಾ? ಇನ್ನಾದರೂ ಬದಲಾಗಿ ಇಲ್ಲವೇ ಕನಿಷ್ಠ ನಿಮ್ಮ ಜಾಹೀರಾತು ಏಜೆನ್ಸಿಯನ್ನಾದರೂ ಬದಲಾಯಿಸಿ‘ ಎಂದು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಕುಹಕವಾಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು, ‘ಇಷ್ಟು ದಿನ ನಮ್ಮ ಎಸ್‌ಪಿ ಸರ್ಕಾರದ ಸಾಧನೆಗಳನ್ನು ತನ್ನದೆಂದು ಬಿಜೆಪಿ ಸುಳ್ಳು ಹೇಳುತ್ತಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಕದರಾಜ್ಯದ ಸರಕನ್ನು ಕದ್ದಿದೆ. ಬಿಜೆಪಿ ಸುಳ್ಳುಗಳನ್ನು ಸೃಷ್ಟಿಸುವ ಒಂದು ಅಂತರರಾಷ್ಟ್ರೀಯ ತರಬೇತಿ ಕೇಂದ್ರ ತೆರೆಯಬೇಕು‘ ಎಂದು ಸಲಹೆ ನೀಡಿದ್ದಾರೆ.

ಈ ಜಾಹೀರಾತನ್ನು ಬಳಸಿಕೊಂಡು ಅನೇಕರು ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಹಾಗೂ ಯೋಗಿ ಆದಿತ್ಯನಾಥ್ ಅವರನ್ನು ಟ್ರೋಲ್ ಕೂಡ ಮಾಡಿದ್ದಾರೆ.

ಈ ಜಾಹೀರಾತು ಪ್ರಕಟಿಸಿದ್ದ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ತಿದ್ದುಪಡಿ ಪ್ರಕಟಿಸಿದೆ. ‘ಉತ್ತರ ಪ್ರದೇಶ ಕುರಿತ ಜಾಹೀರಾತಿನಲ್ಲಿ ಸಂಬಂಧವಿಲ್ಲದ ಚಿತ್ರವನ್ನು ಪತ್ರಿಕೆಯ ಮಾರುಕಟ್ಟೆ ವಿಭಾಗ ಬಳಸಿದೆ. ಈ ಲೋಪಕ್ಕೆ ವಿಷಾದಿಸುತ್ತೇವೆ, ಉಲ್ಲೇಖಿತ ಚಿತ್ರವನ್ನು ಪತ್ರಿಕೆಯ ಡಿಜಿಟಲ್‌ ಆವೃತ್ತಿಗಳಿಂದ ತೆಗೆಯಲಾಗಿದೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.