ADVERTISEMENT

ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ: ದೆಹಲಿ ಮೆಟ್ರೊ

ಪಿಟಿಐ
Published 29 ಆಗಸ್ಟ್ 2021, 12:23 IST
Last Updated 29 ಆಗಸ್ಟ್ 2021, 12:23 IST
ದೆಹಲಿ ಮೆಟ್ರೊ ನಿಲ್ದಾಣ–ಸಾಂದರ್ಭಿಕ ಚಿತ್ರ
ದೆಹಲಿ ಮೆಟ್ರೊ ನಿಲ್ದಾಣ–ಸಾಂದರ್ಭಿಕ ಚಿತ್ರ   

ನವದೆಹಲಿ: ಲೈಂಗಿಕ ಅಲ್ಪಸಂಖ್ಯಾತ ಪ್ರಯಾಣಿಕರಿಗಾಗಿ ದೆಹಲಿ ಮೆಟ್ರೊ ನಿಲ್ದಾಣಗಳಲ್ಲಿ ಪ್ರತ್ಯೇಕ ಶೌಚಾಲಯ ಬಳಕೆಗೆ ಅವಕಾಶ ನೀಡುತ್ತಿರುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಪ್ರಸ್ತುತ ದೆಹಲಿ ಮೆಟ್ರೊದ ವಿವಿಧ ನಿಲ್ದಾಣಗಳಲ್ಲಿ ಒಟ್ಟು 347 ಪ್ರತ್ಯೇಕ ಶೌಚಾಲಯಗಳು ಇರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಲಿಂಗ ಪರಿವರ್ತಿತವ್ಯಕ್ತಿಯು ತಾನು ಗುರುತಿಸಿಕೊಂಡಿರುವಂತೆ 'ಲಿಂಗಾನುಸಾರ' ಶೌಚಾಲಯ ವ್ಯವಸ್ಥೆಯನ್ನೂ ಬಳಕೆ ಮಾಡಬಹುದಾಗಿದೆ.

'ಲೈಂಗಿಕ ಅಲ್ಪಸಂಖ್ಯಾತರ ವಿರುದ್ಧ ಲೈಂಗಿಕ ತಾರತಮ್ಯವನ್ನು ತಡೆಯುವುದು ಮತ್ತು ಅವರಿಗೆ ಸುರಕ್ಷಿತವಾದ ಸ್ಥಳವನ್ನು ಒದಗಿಸುವ ಪ್ರಯತ್ನದ ಭಾಗವಾಗಿ ದೆಹಲಿ ಮೆಟ್ರೊ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿದೆ. ಅಂಗವಿಕಲರಿಗೆ ಮಾತ್ರವೇ ನಿಗದಿಗೊಳಿಸಲಾಗಿದ್ದ ಶೌಚಾಲಯಗಳನ್ನೇ ಲೈಂಗಿಕ ಅಲ್ಪಸಂಖ್ಯಾತರಿಗೂ ಬಳಕೆಗೆ ಮುಕ್ತಗೊಳಿಸಲಾಗಿದೆ' ಎಂದು ದೆಹಲಿ ಮೆಟ್ರೊ (ಡಿಎಂಆರ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಇಂಗ್ಲಿಷ್‌ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ 'ಅಂಗವಿಕಲರಿಗೆ' ಮತ್ತು 'ಲೈಂಗಿಕ ಅಲ್ಪಸಂಖ್ಯಾತರಿಗೆ' ಎಂದು ಸೂಚನೆ ನೀಡುವ ಫಲಕಗಳನ್ನು ಶೌಚಾಲಯಗಳ ಬಳಿ ಅಳವಡಿಸಲಾಗಿದೆ.
ಸುಮಾರು 390 ಕಿ.ಮೀ. ವರೆಗೂ ದೆಹಲಿ ಮೆಟ್ರೊ ಸಂಪರ್ಕವಿದ್ದು, ನೋಯಿಡಾ–ಗ್ರೇಟರ್‌ ನೋಯಿಡಾ, ಗುರುಗ್ರಾಮದ ರ್‍ಯಾಪಿಡ್‌ ಮೆಟ್ರೊ ಸೇರಿದಂತೆ 285 ನಿಲ್ದಾಣಗಳಿವೆ.

ಲೈಂಗಿಕ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಸೆಕ್ಷನ್‌ 22ರ ಅಡಿಯಲ್ಲಿ ಎಲ್ಲ ಸಾರ್ವಜನಿಕ ಕಟ್ಟಡಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶೌಚಾಲಯ ಸೇರಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.