ADVERTISEMENT

ಶಬರಿಮಲೆ: ಲಿಂಗಪರಿವರ್ತಿತರಿಗೆ ಪ್ರವೇಶ ನಿರಾಕರಣೆ

ಪಿಟಿಐ
Published 16 ಡಿಸೆಂಬರ್ 2018, 20:15 IST
Last Updated 16 ಡಿಸೆಂಬರ್ 2018, 20:15 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಎರುಮೇಲಿ (ಕೇರಳ): ಶಬರಿಮಲೆ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿದ್ದ ಲಿಂಗಪರಿವರ್ತಿತರ ಗುಂಪೊಂದನ್ನು ಭಾನುವಾರ ದಾರಿ ಮಧ್ಯೆ ತಡೆಹಿಡಿದ ಪೊಲೀಸರು, ಅವರನ್ನು ವಾಪಸ್ ಕಳುಹಿಸಿದ್ದಾರೆ.

ಸಾಂಪ್ರದಾಯಿಕ ದಿರಿಸಾದ ಕಪ್ಪುಸೀರೆ ಉಟ್ಟಿದ್ದ ಲಿಂಗಪರಿವರ್ತಿತ ಅನನ್ಯಾ, ತೃಪ್ತಿ, ರೆಂಜುಮೋಳ್‌ ಹಾಗೂ ಆವಂತಿಕ ಇರುಮುಡಿ ಹೊತ್ತು ದೇಗುಲಕ್ಕೆ ತೆರಳುತ್ತಿದ್ದರು.

‘ಭಾನುವಾರ ಬೆಳಗಿನ ಜಾವ ನಾವು ಎರುಮೇಲಿ ತಲುಪಿದೆವು.ಆದರೆ ನಮಗೆ ಭದ್ರತೆ ನೀಡಲು ಪೊಲೀಸರು ನಿರಾಕರಿಸಿದರು. ದರ್ಶನ ಪಡೆಯಲು ನಿಮಗೆ ನಿಷೇಧವಿಲ್ಲ, ಆದರೆ ಈ ಕುರಿತು ಕಾನೂನಾತ್ಮಕವಾಗಿ ಸ್ಪಷ್ಟನೆ ದೊರಕಬೇಕಿದೆ ಎಂದರು. ಮಾನಸಿಕವಾಗಿ ಕಿರುಕುಳ ನೀಡಿದ ಪೊಲೀಸರು, ದೇಗುಲಕ್ಕೆ ತೆರಳಬೇಕೆಂದರೆ ಪುರುಷರ ದಿರಿಸು ಧರಿಸಬೇಕೆಂದು ಒತ್ತಾಯಿಸಿದರು’ ಎಂದು ಇವರು ಆರೋಪಿಸಿದ್ದಾರೆ. ಪೊಲೀಸರ ಕ್ರಮದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

ADVERTISEMENT

‘ಸೀರೆ ಬದಲಾಯಿಸಲು ನಾವು ಸಿದ್ಧರಿರಲಿಲ್ಲ. ಮುಟ್ಟಾಗುವ ಮಹಿಳೆಯರ ಪ್ರವೇಶಕ್ಕೆ ಇರುವ ನಿಷೇಧ ನಮಗೆ ಅನ್ವಯವಾಗುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿದೆವು. ಆದರೂ ಅವರು ನಮಗೆಮುಂದೆ ತೆರಳಲು ಅನುಮತಿ ನೀಡಲಿಲ್ಲ’ ಎಂದು ಅನನ್ಯಾ ದೂರಿದ್ದಾರೆ.

ಆರೋಪ ನಿರಾಕರಣೆ: ಕಿರುಕುಳ ನೀಡಲಾಗಿದೆ ಎನ್ನುವ ಆರೋಪವನ್ನು ನಿರಾಕರಿಸಿರುವ ಕೋಟಯಂ ಪೊಲೀಸ್ ವರಿಷ್ಠಾಧಿಕಾರಿ ಎಸ್.ಹರಿಶಂಕರ್, ‘ಎಲ್ಲರಿಗೂ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕಿದೆ. ಆದರೆ ಈ ಕುರಿತು ಕಾನೂನಾತ್ಮಕವಾಗಿ ಮತ್ತಷ್ಟು ಸ್ಪಷ್ಟನೆ ಪಡೆದುಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ, ಹೈಕೋರ್ಟ್ ನೇಮಿಸಿರುವ ಸಮಿತಿಯನ್ನು ಸಂಪರ್ಕಿಸಿ ಸಲಹೆ ಪಡೆಯುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.