ADVERTISEMENT

ನೀರು ಕೇಳಿದ ಆದಿವಾಸಿ ಯುವಕರಿಗೆ ಮೂತ್ರ ಕುಡಿಸಿದ ಆರೋಪ: ನಾಲ್ವರು ಪೊಲೀಸರ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 3:01 IST
Last Updated 13 ಆಗಸ್ಟ್ 2019, 3:01 IST
   

ಭೋಪಾಲ್:ಆದಿವಾಸಿ ಯುವಕರಿಗೆ ಮೂತ್ರ ಕುಡಿಸಿದಆರೋಪದ ಮೇಲೆ ಮಧ್ಯಪ್ರದೇಶದ ಆಲಿರಾಜಪುರ ಜಿಲ್ಲೆ ನಾನ್‌ಪುರ್ ಠಾಣೆಯನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ, ಇಲಾಖಾ ವಿಚಾರಣೆಗೆ ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.

‘ಆದಿವಾಸಿ ಯುವಕರನ್ನು ಪೊಲೀಸರು ಮೂರು ದಿನಗಳ ಹಿಂದೆವಶಕ್ಕೆ ತೆಗೆದುಕೊಂಡಿದ್ದರು. ಚಿತ್ರಹಿಂಸೆಯಿಂದ ಐವರದೇಹದ ಮೇಲೆಯೂ ಗಾಯದ ಗುರುತುಗಳು ಮೂಡಿದ್ದವು. ಪೊಲೀಸರ ತಪ್ಪು ಮೇಲ್ನೋಟಕ್ಕೆ ಸಾಬೀತಾದ ಕಾರಣ ಅವರನ್ನು ಅಮಾನತು ಮಾಡಲಾಯಿತು’ ಎನ್ನುವ ಆಲಿರಾಜ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಪುಲ್ ಶ್ರೀವಾಸ್ತವ ಅವರ ಹೇಳಿಕೆಯನ್ನು ‘ಇಂಡಿಯನ್ ಎಕ್ಸ್‌ಪ್ರೆಸ್‌’ ಮಂಗಳವಾರ ವರದಿ ಮಾಡಿದೆ.

ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಈ ಯುವಕರನ್ನು ಪೊಲೀಸರು ವಿಚಾರಣೆಗೆಂದುವಶಕ್ಕೆ ತೆಗೆದುಕೊಂಡಿದ್ದರು. ಐಪಿಸಿ 353ರ ಅನ್ವಯ (ಸರ್ಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸುವುದು) ಪ್ರಕರಣ ದಾಖಲಿಸಲಾಗಿತ್ತು. ಸ್ಥಳೀಯ ನ್ಯಾಯಾಲಯವು ನೀಡಿದ ಜಾಮೀನಿನ ಮೇಲೆ ಹೊರ ಬಂದ ಆದಿವಾಸಿಗಳು ಪೊಲೀಸರು ನಮಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಆದಿವಾಸಿ ಯುವಕರ ಪೈಕಿ ಓರ್ವನ ಸೋದರಿಯನ್ನು ಮತ್ತೊಬ್ಬ ಯುವಕ ಚುಡಾಯಿಸಿದ್ದ. ಈ ಗಲಾಟೆ ವಿಕೋಪಕ್ಕೆ ಹೋಗಿತ್ತು. ಚುಡಾಯಿಸಿದ ಯುವಕನನ್ನು ಆದಿವಾಸಿಗಳು ಬೆನ್ನಟ್ಟಿದಾಗ ಆ ಯುವಕ ಪೊಲೀಸ್ ವಾಹನವೊಂದರ ಬಳಿ ಹೋಗಿ ರಕ್ಷಣೆ ಬೇಡಿದ. ಪೊಲೀಸರು ಮಧ್ಯಪ್ರವೇಶಿಸಿದಾಗ ಆದಿವಾಸಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನುವುದು ಪೊಲೀಸರು ನೀಡುವ ವಿವರ.

‘ಈವರೆಗೆ ಆ ಯುವಕ ಆದಿವಾಸಿಗಳ ಮೇಲೆ ದೂರು ನೀಡಿಲ್ಲ. ಆದರೆ ಕರ್ತವ್ಯದಲ್ಲಿದ್ದಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾನೆ’ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.