ADVERTISEMENT

ಛತ್ತೀಸಗಢ: ನಕ್ಸಲ್‌ ಪೀಡಿತ 14 ಕುಗ್ರಾಮಗಳಲ್ಲಿ ಧ್ವಜಾರೋಹಣ

ಸ್ವಾತಂತ್ರ್ಯನಂತರ ಇದೇ ಮೊದಲ ಬಾರಿಗೆ ಹಾರಾಡಲಿದೆ ತ್ರಿವರ್ಣ ಧ್ವಜ

ಪಿಟಿಐ
Published 14 ಆಗಸ್ಟ್ 2025, 14:14 IST
Last Updated 14 ಆಗಸ್ಟ್ 2025, 14:14 IST
ಭಾರತದ ತ್ರಿವರ್ಣ ಧ್ವಜ
ಭಾರತದ ತ್ರಿವರ್ಣ ಧ್ವಜ   

ರಾಯಪುರ: ಛತ್ತೀಸಗಢದ ನಕ್ಸಲ್‌ ಪೀಡಿತ ಬಸ್ತರ್‌ ವಲಯದ 14 ಕುಗ್ರಾಮಗಳಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ತ್ರಿವರ್ಣ ಧ್ವಜಾರೋಹಣ ನಡೆಯಲಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಇದೇ ಮೊದಲ ಬಾರಿಗೆ ಈ ಗ್ರಾಮಗಳ ಜನರು ತ್ರಿವರ್ಣ ಧ್ವಜಾರೋಹಣವನ್ನು ಕಣ್ತುಂಬಿಕೊಳ್ಳಲಿದ್ದಾರೆ. 

ಈ ಭಾಗದಲ್ಲಿ ಮಾವೋವಾದಿಗಳ ಬಂಡಾಯವನ್ನು ಬಹುತೇಕ ಶಮನಗೊಳಿಸಲಾಗಿದೆ. ಹೀಗಾಗಿ ಸ್ವಾತಂತ್ರ್ಯ ದಿನಾಚರಣೆ ಮತ್ತು ತ್ರಿವರ್ಣ ಧ್ವಜಾರೋಹಣಕ್ಕೆ ಸಾಕ್ಷಿಯಾಗಲು ಈ ಗ್ರಾಮಗಳ ಜನರು ಅತ್ಯುತ್ಸಾಹದಿಂದ ಕಾಯುತ್ತಿದ್ದಾರೆ. ರಾಷ್ಟ್ರೀಯ ಹಬ್ಬಕ್ಕಾಗಿ ಈಗಾಗಲೇ ಬಹುತೇಕ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ.

ಈ ಹಳ್ಳಿಗಳ ಸಮೀಪವೇ ಭದ್ರತಾ ಪಡೆಗಳ ಹೊಸ ಶಿಬಿರಗಳು ಕಾರ್ಯ ನಿರ್ವಹಿಸುತ್ತಿವೆ. ಇದು ಗ್ರಾಮಸ್ಥರಲ್ಲಿ ಸುರಕ್ಷತೆಯ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. 

ADVERTISEMENT

ಬಿಜಾಪುರ ಜಿಲ್ಲೆಯ ಗುಂಜೆಪರತಿ, ಪೂಜಾರಿಕಂಕೇರ್‌, ಭೀಮಾರಾಮ್, ಕೊರಚೋಲಿ, ಕೊತಪಲ್ಲಿ ಗ್ರಾಮಗಳು, ನಾರಾಯಣಪುರ ಜಿಲ್ಲೆಯ ಕುತುಲ್‌, ಬೆಡಮಾಕೋಟಿ, ಪದಾಮ್‌ಕೋಟ್‌, ಕಂದುಲನಾರ್‌, ನೆಲಂಗೂರ್‌, ಪಂಗೂರ್‌, ರೈನಾರ್‌ ಹಾಗೂ ಸುಕ್ಮಾ ಜಿಲ್ಲೆಯ ಉಸ್ಕವಾಯಾ, ನುಲ್ಕತಾಂಗ್‌ ಗ್ರಾಮಗಳಲ್ಲಿ ತ್ರಿವರ್ಣ ಧ್ವಜಾರೋಹಣ ನಡೆಯಲಿದೆ ಎಂದು ಬಸ್ತಾರ್‌ ವಲಯದ ಐಜಿಪಿ ಪಿ. ಸುಂದರರಾಜ್‌ ಮಾಹಿತಿ ನೀಡಿದರು. 

ಇದೇ ಅಲ್ಲದೆ, ಈ ವರ್ಷ ಗಣರಾಜ್ಯೋತ್ಸವದ ವೇಳೆ ತ್ರಿವರ್ಣ ಧ್ವಜ ಹಾರಿಸಲಾದ ಈ ಮೂರು ಜಿಲ್ಲೆಗಳ ಇತರ 15 ಗ್ರಾಮಗಳಲ್ಲಿಯೂ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುವುದು ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.