ADVERTISEMENT

ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ; ಟಿಎಂಸಿ ಕಾರ್ಯಕರ್ತ ಸಾವು

ಪಿಟಿಐ
Published 5 ಫೆಬ್ರುವರಿ 2023, 9:30 IST
Last Updated 5 ಫೆಬ್ರುವರಿ 2023, 9:30 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಕೋಲ್ಕತ್ತ: ಬಿರ್ಭುಮ್‌ ಜಿಲ್ಲೆಯ ಮಾರ್ಗರ್ಮ್‌ನಲ್ಲಿ ಶನಿವಾರ ಬಾಂಬ್‌ ಸ್ಫೋಟ ಸಂಭವಿಸಿದೆ. ಈ ವೇಳೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿರುವ ಪ್ರಕರಣ ವರದಿಯಾಗಿದೆ. ಇದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಆರೋಪ–ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿದೆ.

ಸ್ಫೋಟದ ಸಂದರ್ಭ ನ್ಯೂಟನ್‌ ಶೇಖ್‌ ಎಂಬುವವರು ಮೃತಪಟ್ಟಿದ್ದಾರೆ. ಮಾರ್ಗರ್ಮ್‌ ಪಂಚಾಯಿತಿಯ ಟಿಎಂಸಿ ಮುಖ್ಯಸ್ಥರ ಸಹೋದರ ಲಲ್ತು ಶೇಖ್‌ ಅವರು ಗಾಯಗೊಂಡಿದ್ದು, ಅವರನ್ನು ಕೋಲ್ಕತ್ತದಲ್ಲಿರುವ ಎಸ್‌ಎಸ್‌ಕೆಎಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯೂಟನ್‌ ಶೇಖ್‌ ಅವರ ಕುಟುಂಬದವರು, ದಾಳಿಯ ಹಿಂದೆ ಕಾಂಗ್ರೆಸ್‌ ಕಾರ್ಯಕರ್ತರು ಇದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಪಶ್ಚಿಮ ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ.

ADVERTISEMENT

ಬಿರ್ಭುಮ್ ಜಿಲ್ಲೆಯು ಜಾರ್ಖಂಡ್‌ನೊಂದಿಗೆ ಗಡಿ ಹಂಚಿಕೊಂಡಿದೆ. ಹೀಗಾಗಿ ದಾಳಿಯ ಹಿಂದೆ ಮಾವೋವಾದಿಗಳ ಕೈವಾಡ ಇರಬಹುದೇ ಎಂದು ಪಶ್ವಿಮ ಬಂಗಾಳ ನಗರಾಭಿವೃದ್ಧಿ ಸಚಿವ ಫಿರ್ಹಾದ್‌ ಹಕಿಂ ಅನುಮಾನ ವ್ಯಕ್ತಪಡಿಸಿದ್ದಾರೆ. ಏಕೆ ಹಾಗೂ ಹೇಗೆ ಈ ದಾಳಿ ನಡೆಸಲಾಯಿತು ಎಂಬ ಬಗ್ಗೆ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಗಾಯಾಳು ಲಲ್ತು ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಹಕಿಂ, 'ನನ್ನ ಪ್ರಕಾರ ದಾಳಿಯ ಹಿಂದೆ ದೊಡ್ಡ ಪಿತೂರಿ ಇದೆ. ಬಾಂಬ್‌ ತಯಾರಿಕೆಗೆ ಬಳಸಲಾದ ವಸ್ತುಗಳ ಮೂಲದ ಬಗ್ಗೆ ತನಿಖೆ ನಡೆಯಬೇಕು' ಎಂದಿದ್ದಾರೆ.

'ಟಿಎಂಸಿಯಲ್ಲಿನ ಆಂತರಿಕ ಸಂಘರ್ಷವೇ ಬಾಂಬ್‌ ಸ್ಫೋಟಕ್ಕೆ ಕಾರಣ' ಎಂದು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಆರೋಪಗಳನ್ನು ಮಾಡಿರುವ ಆರೋಪಗಳನ್ನು ಹಕಿಂ ತಳ್ಳಿಹಾಕಿದ್ದಾರೆ.

'ಮಾರ್ಗರ್ಮ್‌ನಲ್ಲಿ ನಮ್ಮ ಪಕ್ಷಕ್ಕೆ ಸಂಘಟನಾ ಸಾಮರ್ಥ್ಯವೇ ಇಲ್ಲ. ಇದು ಗೊತ್ತಿದ್ದೂ ನಮ್ಮ ಪಕ್ಷಕ್ಕೆ ಯಾರಾದ್ರೂ ಪ್ರಚಾರ ನೀಡಲು ಬಯಸಿದರೆ, ನಮಗೇನು ಅಭ್ಯಂತರವಿಲ್ಲ' ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ಚೌಧರಿ, 'ದಾಳಿ ನಡೆಸಿದವರು ಹಾಗೂ ದಾಳಿ ಸಂತ್ರಸ್ತರಿಬ್ಬರೂ ಟಿಎಂಸಿಯವರೇ ಎಂಬುದು ಎಲ್ಲರಿಗೂ ಗೊತ್ತು' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.