ADVERTISEMENT

ಪಂಜಾಬ್‌ ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯಿಸಿ ಸೋನಿಯಾ ಗಾಂಧಿಗೆ ಶಾಸಕರ ಪತ್ರ

ಪಿಟಿಐ
Published 18 ಸೆಪ್ಟೆಂಬರ್ 2021, 10:13 IST
Last Updated 18 ಸೆಪ್ಟೆಂಬರ್ 2021, 10:13 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಮುಖ್ಯಮಂತ್ರಿ ಸ್ಥಾನದಿಂದ ಕ್ಯಾಪ್ಟನ್‌ ಅಮರಿಂದರ್ ಸಿಂಗ್ ಅವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿ ಪಂಜಾಬ್‌ನ 50ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ನ ಪಂಜಾಬ್‌ ಘಟಕದಲ್ಲಿ ಮತ್ತೊಮ್ಮೆಭಿನ್ನಮತ ಸ್ಫೋಟಗೊಂಡಿದ್ದು, ಅಮರಿಂದರ್‌ ಸಿಂಗ್‌ ಅವರು ಕೂಡ ತಮ್ಮನ್ನು ಪದೇ ಪದೇ ಅವಮಾನಿಸಲಾಗುತ್ತಿದೆ ಎಂದು ಸೋನಿಯಾ ಗಾಂಧಿ ಅವರೊಂದಿಗೆ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

‘ಪಂಜಾಬ್‌ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಉಳಿದಿದೆ. ಈ ನಡುವೆ ಹಲವು ಶಾಸಕರು ಮುಖ್ಯಮಂತ್ರಿ ಬದಲಾವಣೆ ಬೇಡಿಕೆ ಮುಂದಿಟ್ಟಿದ್ದಾರೆ. ಸದ್ಯ ಪರಿಸ್ಥಿತಿ ಬಹಳ ಗಂಭೀರವಾಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಚಂಡೀಗಡದಲ್ಲಿರುವ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಸಂಜೆ 5 ಗಂಟೆಗೆಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಕರೆಯುವಂತೆ ಶಾಸಕರು ಪತ್ರದಲ್ಲಿ ಕೋರಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಅಜಯ್ ಮಾಕೆನ್‌ ಮತ್ತು ಹರೀಶ್ ಚೌಧರಿಯನ್ನು ಕೇಂದ್ರ ವೀಕ್ಷಕರನ್ನಾಗಿ ಹೈಕಮಾಂಡ್ ನಿಯೋಜಿಸಿದೆ.

ಈ ಸಭೆಯಲ್ಲಿ ಪಂಜಾಬ್ ಉಸ್ತುವಾರಿ ನಾಯಕ ಹರೀಶ್ ರಾವತ್ ಅವರು ಕೂಡ ಭಾಗಿಯಾಗಲಿದ್ದಾರೆ.

‘ಇಂದಿನ ಸಿಎಲ್‌ಪಿ ಸಭೆಯಲ್ಲಿ ಏನು ಬೇಕಾದರೂ ಆಗಬಹುದು. ಶಾಸಕರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರೆ, ಸಭೆಯಲ್ಲೇ ಮುಖ್ಯಮಂತ್ರಿ ಬದಲಾವಣೆ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಗಳಿವೆ’ ಎಂದು ಮೂಲಗಳು ಹೇಳಿವೆ.

ಪಂಜಾಬ್ ಕಾಂಗ್ರೆಸ್‌ನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಮುಖ್ಯಮಂತ್ರಿ ಬದಲಾವಣೆಯ ಸಂಭವನೀಯ ಪಟ್ಟಿಯಲ್ಲಿ ಅವರು ಹೆಸರಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.