ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 13 ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಘಂಟಾಘೋಷವಾಗಿ ಹೇಳಿದ್ದಾರೆ. ಈ ಹೇಳಿಕೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವಾಗ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಶನಿವಾರ ಪ್ರಶ್ನಿಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್, '2025ರ ಮೇ 10ರಿಂದ 2025ರ ಜೂನ್ 13ರ ನಡುವಿನ 34 ದಿನಗಳಲ್ಲಿ ಟ್ರಂಪ್ ಅವರು, 3 ದೇಶಗಳಲ್ಲಿ 13 ವಿಭಿನ್ನ ಸಂದರ್ಭಗಳಲ್ಲಿ ಮಾತನಾಡುತ್ತಾ, ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದಾಗಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಈ ಬಗ್ಗೆ ನೀವು(ಮೋದಿ) ಯಾವಾಗ ಮಾತನಾಡುತ್ತೀರಿ' ಎಂದು ಪ್ರಶ್ನಿಸಿದ್ದಾರೆ.
ಟ್ರಂಪ್ ಅವರು ವಿವಿಧ ಸಂದರ್ಭಗಳಲ್ಲಿ ನೀಡಿದ ಹೇಳಿಕೆಗಳ ವಿಡಿಯೊ ಕ್ಲಿಪ್‌ಗಳ ಪಟ್ಟಿ ಹಾಗೂ ಮಾಧ್ಯಮ ವರದಿಗಳ ಲಿಂಕ್ ಸಹಿತ ರಮೇಶ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಘರ್ಷವನ್ನು ನಾನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದ್ದೇನೆ ಎಂದು ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಆ ಬಗ್ಗೆ ಮೌನವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ, ಮೇ 7ರಂದು ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ‘ಆಪರೇಷನ್ ಸಿಂಧೂರ' ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತ್ತು.
ಈ ದಾಳಿಗೆ ಪಾಕ್ ಪ್ರತಿದಾಳಿ ನಡೆಸಿದ್ದು, ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಎರಡೂ ದೇಶಗಳು ಕದನ ಯುದ್ಧ ವಿರಾಮಕ್ಕೆ ಸಮ್ಮತಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.