ತಿರುಪತಿ: ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಮಾಜಿ ಅಧ್ಯಕ್ಷ ಬಿ.ಕರುಣಾಕರ ರೆಡ್ಡಿ ಅವರ ವಿರುದ್ಧ ಟಿಟಿಡಿ ಸದಸ್ಯ ಜಿ ಭಾನು ಪ್ರಕಾಶ್ ಮಂಗಳವಾರ ದೂರು ದಾಖಲಿಸಿದ್ದಾರೆ. ಟಿಟಿಡಿ ಗೋಶಾಲೆಯಲ್ಲಿ ಗೋವುಗಳು ಮೃತಪಡುತ್ತಿವೆ ಎಂದು ಆರೋಪಿಸುವ ಮೂಲಕ ಟಿಟಿಡಿ ಘನತೆಗೆ ಚ್ಯುತಿ ತರಲು ರೆಡ್ಡಿ ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ.
ಟಿಟಿಡಿ ಗೋಶಾಲೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಕಳೆದ 3 ತಿಂಗಳಲ್ಲಿ 100 ಗೋವುಗಳು ಮೃತಪಟ್ಟಿವೆ ಎಂದು ಏ.11ರಂದು ರೆಡ್ಡಿ ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಬೇಕೆಂದೂ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ರೆಡ್ಡಿ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರಕಾಶ್ ದೂರು ನೀಡಿದ್ದಾರೆ.
‘ರೆಡ್ಡಿ ಅವರು ಮಾಡುತ್ತಿರುವ ಆಧಾರರಹಿತ ಆರೋಪಗಳು ದೇಗುಲ ಹಾಗೂ ಆಡಳಿತ ಮಂಡಳಿಯ ಘನತೆಗೆ ಧಕ್ಕೆ ತರುತ್ತವೆ. ಅಲ್ಲದೇ, ಜನಸಾಮಾನ್ಯರ ಕಣ್ಣಿನಲ್ಲಿ ದೇಗುಲದ ಗೌರವಕ್ಕೂ ಚ್ಯುತಿ ತರುತ್ತಿದ್ದು, ಮಾನಹಾನಿಕರವೂ ಆಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಪ್ರಕಾಶ್ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.