ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಗೆ ಸೇರಿದ ಹಣವನ್ನು ಬಳಸಿಕೊಂಡು ಆಂಧ್ರಪ್ರದೇಶದ ದಲಿತರ ಕಾಲೊನಿಗಳಲ್ಲಿ 5 ಸಾವಿರ ವೆಂಕಟೇಶ್ವರ ದೇವಾಲಯಗಳನ್ನು ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಘೋಷಿಸಿದ್ದನ್ನು ಆಂಧ್ರ ಪ್ರದೇಶ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಟೀಕಿಸಿದ್ದಾರೆ.
‘ಪ್ರಮುಖ ವಿಚಾರಗಳಿಂದ ಜನರನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಇದಾಗಿದ್ದು, ಕೂಡಲೇ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಸಂವಿಧಾನದ ವಿರುದ್ಧ ಆರ್‌ಎಸ್ಎಸ್ ಸಿದ್ಧಾಂತ ಮುಂದಿಟ್ಟುಕೊಂಡು ದೇವಾಲಯಗಳನ್ನು ನಿರ್ಮಿಸುವುದು ಸರಿಯಲ್ಲ’ ಎಂದು ವಿಜಯವಾಡದಲ್ಲಿ ತಿಳಿಸಿದರು.
‘ನಮ್ಮ ಪ್ರಜಾಪ್ರಭುತ್ವವು ಜಾತ್ಯತೀತ ತತ್ವದ ತಳಹದಿಯಲ್ಲಿ ನಿರ್ಮಾಣಗೊಂಡಿದೆ. ಎಲ್ಲ ಧರ್ಮಗಳನ್ನು ಆಚರಿಸುವ ಗ್ಯಾರಂಟಿಯನ್ನು ಸಂವಿಧಾನವೇ ನೀಡಿದೆ. ಹೀಗಿದ್ದರೂ ಆರ್‌ಎಸ್‌ಎಸ್ ತನ್ನದೇ ಆದ ಸಂವಿಧಾನವನ್ನು ಜಾರಿ ಮಾಡಲು ಹೊರಟಿದೆ. ಹಿಂದೂಗಳು ಮಾತ್ರ ಮನುಷ್ಯರೆಂದು ಪರಿಗಣಿಸಿ, ಉಳಿದವರ ನಂಬಿಕೆಗಳನ್ನು ಕಡೆಗಣಿಸಲಾಗುತ್ತದೆ. ಒಂದೊಮ್ಮೆ ದಲಿತರ ಕಾಲೊನಿಗಳಲ್ಲಿ ದೇವಾಲಯ ನಿರ್ಮಿಸಿದರೆ, ಅದರ ಪೂಜೆ ಯಾರು ಮಾಡುತ್ತಾರೆ? ಬ್ರಾಹ್ಮಣರೇ ಅಥವಾ ದಲಿತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆಯೇ? ನಾಯ್ಡು ಅವರಿಗೆ ದಲಿತ ನಿಜವಾದ ಕಾಳಜಿಯಿದ್ದರೆ, ಅವರ ಅಭಿವೃದ್ಧಿಗೆ ಗಮನಹರಿಸಬೇಕು. ಈಗ ಅವರು ಆರ್‌ಎಸ್‌ಎಸ್ ವ್ಯಕ್ತಿಯಾಗಿ ಬದಲಾಗಿದ್ದಾರೆ’ ಎಂದು ಅವರು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.