ADVERTISEMENT

ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಹಿಸಿ: ಭಕ್ತರಿಗೆ ಟಿಟಿಡಿ ಸೂಚನೆ

ಪಿಟಿಐ
Published 25 ಫೆಬ್ರುವರಿ 2026, 16:09 IST
Last Updated 25 ಫೆಬ್ರುವರಿ 2026, 16:09 IST
ತಿರುಮಲ ತಿರುಪತಿ ದೇಗುಲ
ತಿರುಮಲ ತಿರುಪತಿ ದೇಗುಲ   

ತಿರುಪತಿ: ತಿರುಮಲದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದಾಗಿ ವಂಚಿಸುವ ನಕಲಿ ವೆಬ್‌ಸೈಟ್‌ಗಳು ಮತ್ತು ಮಧ್ಯವರ್ತಿಗಳ ಬಗ್ಗೆ ಎಚ್ಚರ ವಹಿಸುವಂತೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಬುಧವಾರ ತಿಳಿಸಿದೆ.

ತಿರುಮಲದಲ್ಲಿ ‘ಕರ್ನಾಟಕ ಪ್ರವಾಸಿ ಸೌಧ’ದ ಹೆಸರಿನಲ್ಲಿ ಕೊಠಡಿಯನ್ನು ನೀಡುವುದಾಗಿ ವ್ಯಕ್ತಿಯೊಬ್ಬರು ಮೋಸ ಮಾಡಿದ್ದಾರೆ ಎಂದು ಕೇರಳದ ಭಕ್ತರೊಬ್ಬರು ದೂರು ನೀಡಿದ ಬಳಿಕ ಈ ವಿಷಯ ಗೊತ್ತಾಗಿದೆ.

‘ದೂರಿನ ಬಗ್ಗೆ ಜಾಗೃತ ದಳವು ತನಿಖೆ ನಡೆಸಿದೆ. ಅನಧಿಕೃತ ವ್ಯಕ್ತಿಗಳು ತಿರುಮಲ ತಿರುಪತಿ ದೇವಸ್ಥಾನದ ಚಿತ್ರ, ಚಿಹ್ನೆ ಬಳಸಿ ನಕಲಿ ವೆಬ್‌ಸೈಟ್‌ ತೆರೆದು ಭಕ್ತರ ದಾರಿ ತಪ್ಪಿಸುತ್ತಿರುವುದು ಗೊತ್ತಾಗಿದೆ ಎಂದು ಟಿಟಿಡಿ ಹೇಳಿದೆದೆ.

ADVERTISEMENT

‘ಗೂಗಲ್‌ ಸರ್ಚ್‌ನಲ್ಲಿ ವೆಬ್‌ಸೈಟ್‌ಗಳು ಗೋಚರಿಸುತ್ತಿವೆ. ವಂಚಕರು ಆನ್‌ಲೈನ್‌ ಮೂಲಕ ಭಕ್ತರಿಂದ ಹಣ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ದೇಗುಲದ ಚಿತ್ರ ಮತ್ತು ಆಡಳಿತ ಮಂಡಳಿಯ ಚಿಹ್ನೆ ಬಳಸಿರುವವರ ವಿರುದ್ಧ ಟಿಟಿಡಿ ಐಟಿ ವಿಭಾಗ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ’ ಎಂದು ತಿಳಿಸಿದೆ.

ಅನುಮಾನ ಬರುವ ವೆಬ್‌ಸೈಟ್, ದೂರವಾಣಿ ಕರೆಗಳ ಬಗ್ಗೆ ಟಿಟಿಡಿಗೆ ಮಾಹಿತಿ ನೀಡಿ. ದೇಗುಲದ ಅಧಿಕೃತ ವೆಬ್‌ಸೈಟ್‌ನಲ್ಲೇ ದರ್ಶನ, ಕೊಠಡಿ ಮತ್ತು ಸೇವಾ ರಶೀದಿಗಳನ್ನು ಪಡೆಯಿರಿ ಎಂದು ಭಕ್ತರಿಗೆ ತಿಳಿಸಿದೆ.

ಕಲಬೆರೆಕೆ ತುಪ್ಪ: ‘ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ರಸಾಯನಿಕಗಳಿಂದ ತಯಾರಾದ ಕಲಬೆರಕೆ ತುಪ್ಪ ಬಳಸಿ 20 ಕೋಟಿ ಲಾಡು ತಯಾರಿಸಲಾಗಿತ್ತು’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಮರ್ಕಾಪುರಂನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ತಮ್ಮ ಕುಟುಂಬ ಮುನ್ನಡೆಸಿಕೊಂಡು ಹೋಗುತ್ತಿರುವ ‘ಹೆರಿಟೇಜ್‌ ಫುಡ್‌’ಗೂ ವಿರೋಧ ಪಕ್ಷದ ನಾಯಕರು ಕಲಬೆರಕೆ ಮಾಡಿ, ಹೆಸರು ಕೆಡಿಸಲು ಯತ್ನಿಸಿದ್ದರು. ಆದರೂ, ತಿರುಪತಿ ಲಾಡು ಪ್ರಕರಣಕ್ಕೂ, ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ’ ಎಂದು ತಿಳಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.