ADVERTISEMENT

ತುರ್ಕ್‌ಮಾನ್‌ ಗೇಟ್ ಹಿಂಸಾಚಾರ: ಮತ್ತೆ ಆರು ಮಂದಿ ಬಂಧನ

ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಲ್ಲು ತೂರಾಟ; ಒಟ್ಟು ಬಂಧಿತರ ಸಂಖ್ಯೆ 11ಕ್ಕೆ ಏರಿಕೆ

ಪಿಟಿಐ
Published 8 ಜನವರಿ 2026, 16:19 IST
Last Updated 8 ಜನವರಿ 2026, 16:19 IST
ದೆಹಲಿಯ ಸೈಯದ್‌ ಫೈಜ್‌ ಇಲಾಹಿ ಮಸೀದಿ ಬಳಿ ನಡೆದಿದ್ದ ಒತ್ತುವರಿ ತೆರವು ಕಾರ್ಯಾಚರಣೆ (ಸಾಂದರ್ಭಿಕ ಚಿತ್ರ)
ದೆಹಲಿಯ ಸೈಯದ್‌ ಫೈಜ್‌ ಇಲಾಹಿ ಮಸೀದಿ ಬಳಿ ನಡೆದಿದ್ದ ಒತ್ತುವರಿ ತೆರವು ಕಾರ್ಯಾಚರಣೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ದೆಹಲಿಯ ರಾಮಲೀಲಾ ಮೈದಾನ ಪ್ರದೇಶದ ಸೈಯದ್ ಫೈಜ್‌ ಇಲಾಹಿ ಮಸೀದಿ ಸಮೀಪ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಮತ್ತೆ ಆರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ತುರ್ಕ್‌ಮಾನ್‌ ಗೇಟ್‌ ಪ್ರದೇಶದ ನಿವಾಸಿಗಳಾದ ಅಫಾನ್‌, ಆದಿಲ್‌, ಶಹನವಾಜ್‌, ಹಮ್ಜಾ, ಅಥರ್‌ ಮತ್ತು ಉಬೇದ್‌ ಬಂಧಿತರು. ಒಟ್ಟು ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇದರಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೂ ಸೇರಿದ್ದಾನೆ.

‘ಕಾನೂನು, ಸುವ್ಯವಸ್ಥೆ ಕಾಪಾಡಲು ಹಾಗೂ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸ್ಥಳದಲ್ಲಿ ಸಾಕಷ್ಟು ಪೊಲೀಸ್‌ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಕೇಂದ್ರ) ನಿಧಿನ್‌ ವಲ್ಸನ್‌ ತಿಳಿಸಿದ್ದಾರೆ.

ADVERTISEMENT

ದೆಹಲಿ ಹೈಕೋರ್ಟ್‌ ಸೂಚನೆಯಂತೆ, ಮಸೀದಿಗೆ ಹೊಂದಿಕೊಂಡಿರುವ ಜಾಗ ಮತ್ತು ತುರ್ಕ್‌ಮಾನ್‌ ಗೇಟ್ ಹತ್ತಿರದ ಸ್ಮಶಾನದಲ್ಲಿನ ಒತ್ತುವರಿ ತೆರವು ಕಾರ್ಯವನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಬುಧವಾರ ಬೆಳಿಗ್ಗೆ ಕೈಗೆತ್ತಿಕೊಂಡಿತ್ತು. ಜೆಸಿಬಿ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಕೆಲವು ಕಿಡಿಗೇಡಿಗಳು ಎಂಸಿಡಿ ಸಿಬ್ಬಂದಿ, ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದು, ಠಾಣಾಧಿಕಾರಿ ಸೇರಿದಂತೆ ಐವರು ಪೊಲೀಸರು ಗಾಯಗೊಂಡಿದ್ದರು.

‘ಒತ್ತುವರಿ ತೆರವು ಕಾರ್ಯಾಚರಣೆ ಮೂಲಕ ತುರ್ಕ್‌ಮಾನ್‌ ಗೇಟ್‌ ಎದುರಿನ ಮಸೀದಿಯನ್ನು ಕೆಡವಲಾಗುತ್ತಿದೆ’ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದರಿಂದ ಹೆಚ್ಚಿನ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಈ ಹಿಂಸಾಚಾರದಲ್ಲಿ 150ರಿಂದ 200 ಮಂದಿ ಭಾಗಿಯಾಗಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವದಂತಿ: ಮಹಿಳೆಯ ವಿಚಾರಣೆ

‘ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ತುರ್ಕ್‌ಮಾನ್‌ ಗೇಟ್‌ ಎದುರಿನ ಸೈಯದ್ ಫೈಜ್‌ ಇಲಾಹಿ ಮಸೀದಿಯನ್ನು ಕೆಡವಲಾಗಿದೆ’ ಎಂಬ ವದಂತಿಗಳನ್ನು ಹರಡಿದ್ದ ಸಾಮಾಜಿಕ ಮಾಧ್ಯಮಗಳ ಕನಿಷ್ಠ 10 ಖಾತೆಗಳನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದು ಮಹಿಳೆಯೊಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  ‘ದೆಹಲಿಯ ರಾಮಲೀಲಾ ಮೈದಾನದಲ್ಲಿರುವ ಮಸೀದಿಯನ್ನು ಧ್ವಂಸ ಮಾಡಲಾಗಿದೆ ಎಂದು ಮಹಿಳೆ ಹೇಳಿರುವ ವಿಡಿಯೊವನ್ನು ಪೊಲೀಸರ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡಗಳು ಪತ್ತೆ ಮಾಡಿದ್ದು ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಉಳಿದ ಖಾತೆಗಳಲ್ಲಿ ಪ್ರಸಾರ ಮಾಡಿರುವ ವಿಡಿಯೊ ಹಾಗೂ ವಿಷಯಗಳನ್ನು ವಿಶ್ಲೇಷಿಸಲಾಗುತ್ತಿದೆ.

ಅವರನ್ನೂ ಶೀಘದಲ್ಲೇ ವಿಚಾರಣೆ ನಡೆಸಲಾಗುವುದು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ‘ಒತ್ತುವರಿ ತೆರವು ಕಾರ್ಯಾಚರಣೆಗೂ ಕೆಲ ದಿನಗಳ ಮೊದಲು 120–130ಕ್ಕೂ ಹೆಚ್ಚು ಮೌಲ್ವಿಗಳೊಂದಿಗೆ ವೈಯಕ್ತಿಕವಾಗಿ ಸಭೆ ನಡೆಸಿದ್ದೆ. ಮಸೀದಿಯನ್ನು ಧ್ವಂಸಗೊಳಿಸುವುದಿಲ್ಲ.

ಅಕ್ರಮವಾಗಿ ಒತ್ತುವರಿ ಮಾಡಿರುವ ಪ್ರದೇಶವನ್ನು ಮಾತ್ರ ತೆರವುಗೊಳಿಸಲಾಗುವುದು. ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂದು ಅವರಿಗೆ ತಿಳಿಸಿದ್ದೆ’ ಎಂದು ನಿಧಿನ್‌ ವಲ್ಸನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.