ADVERTISEMENT

ಟಿವಿಕೆ ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ: ಮದ್ರಾಸ್ ಹೈಕೋರ್ಟ್‌ಗೆ ಚುನಾವಣಾ ಆಯೋಗ

ಪಿಟಿಐ
Published 17 ಅಕ್ಟೋಬರ್ 2025, 10:10 IST
Last Updated 17 ಅಕ್ಟೋಬರ್ 2025, 10:10 IST
<div class="paragraphs"><p>ಟಿವಿಕೆ ನಾಯಕ ವಿಜಯ್</p></div>

ಟಿವಿಕೆ ನಾಯಕ ವಿಜಯ್

   

ಚೆನ್ನೈ: ತಮಿಳಿನ ಖ್ಯಾತ ನಟ, ರಾಜಕಾರಣಿ ವಿಜಯ್ ಅವರ ಟಿವಿಕೆ ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲ ಎಂದು ಭಾರತದ ಚುನಾವಣಾ ಆಯೋಗವು ಶುಕ್ರವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ.

ಚುನಾವಣಾ ಆಯೋಗದ ಪರ ಹಾಜರಿದ್ದ ವಕೀಲ ನಿರಂಜನ್ ರಾಜಗೋಪಾಲ್ ಅವರು ಮುಖ್ಯ ನ್ಯಾಯಮೂರ್ತಿ ಎಂ.ಎಂ. ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠದ ಮುಂದೆ ಈ ವಿಷಯ ತಿಳಿಸಿದರು.

ADVERTISEMENT

ಸೆಪ್ಟೆಂಬರ್ 27ರಂದು ಕರೂರಿನಲ್ಲಿ ಆಯೋಜಿಸಲಾಗಿದ್ದ ಪಕ್ಷದ ರ್‍ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವಿಗೀಡಾದ ಹಿನ್ನೆಲೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮಾನ್ಯತೆ ರದ್ದುಗೊಳಿಸುವಂತೆ ಕೋರಿ ಸಿ. ಸೆಲ್ವಕುಮಾರ್ ಮತ್ತು ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಟಿವಿಕೆಗೆ ಮಾನ್ಯತೆಯೇ ಇಲ್ಲದಿರುವುದರಿಂದ ಈ ಪಿಐಎಲ್‌ಗೆ ಯಾವುದೇ ಮಹತ್ವ ಇಲ್ಲ ಎಂದು ನಿರಂಜನ್ ರಾಜಗೋಪಾಲ್ ವಾದಿಸಿದರು.

ಸೆಪ್ಟೆಂಬರ್ 27ರ ಕರೂರ್ ಕಾಲ್ತುಳಿತಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಹೈಕೋರ್ಟ್‌ನ ಆಡಳಿತಾತ್ಮಕ ವಿಭಾಗದ ಮುಂದೆ ಇಡಲು ಸೂಚಿಸಿದ ನ್ಯಾಯಾಲಯ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೊರತುಪಡಿಸಿ, ಉಳಿದ ಪ್ರಕರಣಗಳ ವಿಚಾರಣೆಗೆ ಪೀಠವನ್ನು ರಚಿಸಲು ರಿಜಿಸ್ಟ್ರಿಗೆ ನಿರ್ದೇಶನ ನೀಡಿತು.

ಮೂಲತಃ, ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಸಲ್ಲಿಸಲಾಗಿತ್ತು, ಆದರೆ, ಅರ್ಜಿಯಲ್ಲಿ ಮೊದಲ ಪ್ರತಿವಾದಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದರಿಂದ ಅದನ್ನು ವರ್ಗಾಯಿಸಿ ಮೊದಲ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.