ADVERTISEMENT

ಬಿಜೆಪಿ ಐಟಿ ವಿಭಾಗದ ಸದಸ್ಯನಿಂದ ಉದ್ಧವ್‌ ಠಾಕ್ರೆ ಪತ್ನಿಯ ಅವಹೇಳನ: ವಿವಾದ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 2:20 IST
Last Updated 7 ಜನವರಿ 2022, 2:20 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಪತ್ನಿ ರಶ್ಮಿ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಪತ್ನಿ ರಶ್ಮಿ    

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರನ್ನು ‘ಮರಾಠಿ ರಾಬ್ಡಿ ದೇವಿ’ ಎಂದು ಮೂದಲಿಸಿದ ಟ್ವಿಟರ್‌ ಪೋಸ್ಟ್‌ ಸದ್ಯ ಮಹಾರಾಷ್ಟ್ರದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ತಂದಿಟ್ಟಿದೆ.

ಮಹಾರಾಷ್ಟ್ರ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಭಾಗವಾಗಿರುವ ಜಿತಿನ್ ಗಜಾರಿಯಾ ಎಂಬುವವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ರಶ್ಮಿ ಅವರ ಫೋಟೋ ಹಾಕಿ, ‘ಮರಾಠಿ ರಾಬ್ಡಿ ದೇವಿ’ ಎಂದು ಗೇಲಿ ಮಾಡಿದ್ದಾರೆ. ರಶ್ಮಿ ಅವರಲ್ಲದೇ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧವೂ ಟ್ವೀಟ್ ಮಾಡಿದ್ದರು. ಇದು ಮಹಾರಾಷ್ಟ್ರದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.

ಹೀಗಾಗಿ ಗಜಾರಿಯಾ ಅವರನ್ನು ಮುಂಬೈ ಸೈಬರ್‌ ಅಪರಾಧ ವಿಭಾಗದ ಪೊಲೀಸರು ವಿಚಾರಣೆಗೆ ಕರೆಸಿಕೊಂಡಿದ್ದರು.

ADVERTISEMENT

‘ಹೇಳಿಕೆ ದಾಖಲಿಸಲು ಗಜಾರಿಯಾ ಅವರನ್ನು ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಸೈಬರ್ ಸೆಲ್‌ಗೆ ಕರೆಯಲಾಗಿತ್ತು. ಈ ಬಗ್ಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ,’ ಎಂದು ವಕೀಲ ವಿವೇಕಾನಂದ ಗುಪ್ತಾ ಹೇಳಿದ್ದಾರೆ.

ರಶ್ಮಿ ಅವರ ವಿರುದ್ಧದ ಟ್ವೀಟ್ ಅತ್ಯಂತ ಆಕ್ಷೇಪಾರ್ಹ ಎಂದು ವಿಧಾನ ಪರಿಷತ್‌ನ ಶಿವಸೇನೆ ಸದಸ್ಯ ಡಾ.ನೀಲಂ ಗೋರ್ಹೆ ಹೇಳಿದ್ದಾರೆ.

ರಾಬ್ಡಿ ದೇವಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಅವರ ಪತ್ನಿ. ಮೇವು ಹಗರಣದಲ್ಲಿ ಲಾಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಾಗ ಪತ್ನಿ ರಾಬ್ಡಿ ದೇವಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.