ADVERTISEMENT

ಮುಚ್ಚಿದ 20 ಸಾವಿರ ಶಾಲೆಗಳು: ಕೇಂದ್ರ ಶಿಕ್ಷಣ ಸಚಿವಾಲಯದಿಂದ ವರದಿ ಬಿಡುಗಡೆ

ಪಿಟಿಐ
Published 3 ನವೆಂಬರ್ 2022, 19:37 IST
Last Updated 3 ನವೆಂಬರ್ 2022, 19:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೇಶದಲ್ಲಿನ ಶಾಲೆಗಳ ಸ್ಥಿತಿಗತಿ ಕುರಿತ ‘ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ–2021–22’ ವರದಿಯನ್ನುಕೇಂದ್ರ ಶಿಕ್ಷಣ ಸಚಿವಾಲಯದ ‘ಎಜುಕೇಷನ್‌+’ ಗುರುವಾರ ಬಿಡುಗಡೆ ಮಾಡಿದೆ. ಕೋವಿಡ್‌ ನಂತರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆದ ಬದಲಾವಣೆಗಳನ್ನು ಇಲ್ಲಿ ಹೇಳಲಾಗಿದೆ. ಎಷ್ಟುಶಾಲೆಗಳುಮುಚ್ಚಿವೆ, ಶಿಕ್ಷಕರ ಸಂಖ್ಯೆಯ ಏರಿಕೆ–ಇಳಿಕೆ, ಮಕ್ಕಳ ದಾಖಲಾತಿ, ಪರಿಶಿಷ್ಠ ಜಾತಿ/ವರ್ಗಕ್ಕೆ ಸೇರಿದ ಮಕ್ಕಳ ಶಾಲಾ ದಾಖಲಾತಿ ಮತ್ತು ದೇಶದ ಶಾಲೆಗಳ ಕಾರ್ಯಕ್ಷಮತೆಗೆ ಶ್ರೇಯಾಂಕ ನೀಡುವ ಸೂಚ್ಯಂಕಗಳ ಮಾಹಿತಿಗಳನ್ನು ಒಳಗೊಂಡ ವರದಿ ಇದಾಗಿದೆ.

ಶಾಲೆಗಳ ಕಾರ್ಯಕ್ಷಮತೆ ಶ್ರೇಯಾಂಕ

ಶಾಲೆಗಳ ಕಾರ್ಯಕ್ಷಮತೆಯನ್ನು ಪರಿಗಣಿಸಿ ನೀಡಲಾಗುವ ಶ್ರೇಯಾಂಕ ಪಟ್ಟಿಯಲ್ಲಿ ಯಾವ ರಾಜ್ಯವೂ ಅತ್ಯುತ್ತಮ ಸ್ಥಾನ (ಲೆವೆಲ್‌1) ಪಡೆದುಕೊಂಡಿಲ್ಲ. ಆದರೆ, ಏಳು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶವು ಪಟ್ಟಿಯಲ್ಲಿ ಉತ್ತಮ ಸ್ಥಾನ (ಲೆವೆಲ್‌2) ಪಡೆದುಕೊಂಡಿವೆ.

ADVERTISEMENT

ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ, ಪಂಜಾಬ್‌, ಚಂಡೀಗಢ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳು ಈ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದುಕೊಂಡಿರುವ ರಾಜ್ಯಗಳು. ಲಡಾಖ್‌ ಕೇಂದ್ರಡಳಿತ ಪ್ರದೇಶವು ಲೆವೆಲ್‌ 8ರಿಂದ ಲೆವೆಲ್‌ 4ಕ್ಕೆ ತಲು‍ಪಿದೆ.

ಶಾಲೆಗಳ ಕಾರ್ಯಕ್ಷಮತೆಯನ್ನು ಅಳೆಯುವುದಕ್ಕಾಗಿ 70 ಅಂಶಗಳನ್ನು ಗುರುತಿಸಿ, ಎರಡು ವರ್ಗಗಳಾಗಿ ವಿಂಗಡಣೆ ಮಾಡಲಾಗಿತ್ತು. ಅವುಗಳೆಂದರೆ, ಫಲಿತಾಂಶ ಮತ್ತು ಆಡಳಿತ ನಿರ್ವಹಣೆ. ಇವುಗಳನ್ನು ಮತ್ತೆ ಐದು ಅಂಶಗಳಲ್ಲಿ ವಿಭಾಗ ಮಾಡಲಾಗಿತ್ತು. ಅವುಗಳೆಂದರೆ, ಕಲಿಕೆ ಫಲಿತಾಂಶ, ಮೂಲಭೂತ ಸೌಕರ್ಯ ಮತ್ತು ಸೌಲಭ್ಯ, ಆಡಳಿತ ಪ್ರಕ್ರಿಯೆ ಹಾಗೂ ಅವಕಾಶ ಇವುಗಳಿಗೆ 1000 ಅಂಕಗಳನ್ನು ನಿಗದಿ ಮಾಡಲಾಗಿತ್ತು.

ಭಾರತದಲ್ಲಿ 10ರಲ್ಲಿ 7 ಖಾಸಗಿ ಶಾಲೆಗಳು

ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ತೆರೆದಿರುವ 10 ಶಾಲೆಗಳಲ್ಲಿ 7 ಶಾಲೆಗಳು ಖಾಸಗಿ ಶಾಲೆಗಳಾಗಿವೆ ಎಂದು ಯುನೆಸ್ಕೊ ತನ್ನ ಗ್ಲೋಬಲ್‌ ಎಜುಕೇಷನ್‌ ಮೊನಿಟರಿಂಗ್‌ ರಿಪೋರ್ಟ್‌ 2022ರಲ್ಲಿ ಹೇಳಿದೆ. ದಕ್ಷಿಣ ಏಷ್ಯಾ ದೇಶಗಳಲ್ಲಿ ಯುನೆಸ್ಕೊ ಸಮೀಕ್ಷೆಗಳನ್ನು ನಡೆಸಿ, ವರದಿ ಸಿದ್ಧಪಡಿಸಿದೆ.

ಪೋಷಕರ ಆಕಾಂಕ್ಷೆಗಳ ಮಟ್ಟಕ್ಕೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ದೊರೆಯದಿರುವ ಕಾರಣಕ್ಕೆ ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುತ್ತಿವೆ ಎಂದು ವರದಿ ಹೇಳಿದೆ.

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂದು ಶೇ 73ರಷ್ಟು ಪೋಷಕರು ಸಮೀಕ್ಷೆಯೊಂದರಲ್ಲಿ ಅಭಿಪ್ರಾಯಪಡುತ್ತಾರೆ. ಶೇ 12ರಷ್ಟು ಪೋಷಕರು ಇಂಗ್ಲಿಷ್‌ ಮಾಧ್ಯಮ ಬೇಕು ಹಾಗೂ ಶೇ 10ರಷ್ಟು ಪೋಷಕರು ಸರ್ಕಾರಿ ಶಾಲೆಯ ಲಭ್ಯತೆ ಇಲ್ಲ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.