ADVERTISEMENT

ಟ್ವಿಟರ್‌ನಿಂದ ಮೇಲ್ನೋಟಕ್ಕೆ ಮಾತ್ರ ಐಟಿ ನಿಯಮಗಳ ಪಾಲನೆ

ದೆಹಲಿ ಹೈಕೋರ್ಟ್‌ಗೆ ಕೇಂದ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 18:18 IST
Last Updated 10 ಆಗಸ್ಟ್ 2021, 18:18 IST
ಟ್ವಿಟರ್
ಟ್ವಿಟರ್   

ನವದೆಹಲಿ (ಪಿಟಿಐ): 'ಕಾಯಂ ಆಧಾರದಲ್ಲಿ ಮುಖ್ಯ ಕಾನೂನು ಪಾಲನೆ ಅಧಿಕಾರಿ (ಸಿಸಿಒ), ಸ್ಥಾನಿಕ ಕುಂದುಕೊರತೆ ಅಧಿಕಾರಿ (ಆರ್‌ಜಿಒ) ಮತ್ತು ನೋಡಲ್‌ ಅಧಿಕಾರಿಯನ್ನು ನೇಮಿಸುವ ಮೂಲಕ ಟ್ವಿಟರ್‌ ಮೇಲ್ನೋಟಕ್ಕೆ ನೂತನ ಐಟಿ ನಿಯಮಗಳನ್ನು ಪಾಲನೆ ಮಾಡಿರುವಂತೆ ತೋರುತ್ತದೆ' ಎಂದು ಕೇಂದ್ರ ಸರ್ಕಾರ ಮಂಗಳವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಟ್ವಿಟರ್‌ ಐಟಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ಈ ಮಾಹಿತಿ ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು, 'ಸರ್ಕಾರವು ತನ್ನ ಹೇಳಿಕೆ ಬಗ್ಗೆ ಎರಡು ವಾರಗಳಲ್ಲಿಪ್ರಮಾಣಪತ್ರ ಸಲ್ಲಿಸಬೇಕು' ಎಂದು ಸೂಚಿಸಿದ್ದಾರೆ.ಅಕ್ಟೋಬರ್‌ 5 ರಂದು ಮುಂದಿನ ವಿಚಾರಣೆ ನಡೆಯಲಿದೆ.

‌‌‘ಹೊಸ ಕಾನೂನಿನ ಅನುಸಾರ ಟ್ವಿಟರ್ ಮೂವರು ಅಧಿಕಾರಿಗಳನ್ನು ನೇಮಿಸಿದೆ.ಆ ಕುರಿತು ಇ–ಮೇಲ್‌ ಬಂದಿದೆ. ಆದರೂಪ್ರಮಾಣಪತ್ರ ಸಲ್ಲಿಸುವುದು ಉತ್ತಮ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಚೇತನ್‌ ಶರ್ಮಾಪೀಠಕ್ಕೆ ತಮ್ಮ ಅಭಿಪ್ರಾಯ ತಿಳಿಸಿದರು.

ADVERTISEMENT

'ಟ್ವಿಟರ್‌, ಮೂರು ಹುದ್ದೆಗಳಿಗೆ ಕಾಯಂ ಅಧಿಕಾರಿಗಳನ್ನು ನೇಮಿಸಿದೆ.ನೇಮಕವಾದ ಅಧಿಕಾರಿಗಳು ಪೂರ್ಣಾವಧಿ ಆಧಾರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನ್ಯಾಯಾಲಯ ನಮಗೆ ದೀರ್ಘಾವಧಿ ಸಮಯ ನೀಡಿತ್ತು. ಅಂತಿಮವಾಗಿ ನಾವು ಅಧಿಕಾರಿಗಳನ್ನು ನೇಮಿಸಿದ್ದೇವೆ' ಎಂದು ಟ್ವಿಟರ್ ಪರ ವಕೀಲ ಸಜನ್ ಪೂವಯ್ಯ ಹೇಳಿದರು.

ಮುಖ್ಯ ಕುಂದುಕೊರತೆ ಅಧಿಕಾರಿಯನ್ನು ಪೂರ್ಣಾವಧಿಗೆ ನೇಮಕ ಮಾಡದ ಹಿನ್ನೆಲೆ ಜುಲೈ 28 ರಂದು ನ್ಯಾಯಾಲಯ ಟ್ವಿಟರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಹೊಸ ಐಟಿ ನಿಯಮಗಳನ್ನು ಟ್ವಿಟರ್ ಪಾಲಿಸುತ್ತಿಲ್ಲ ಎಂದು ಹೇಳಿತ್ತು.‘ನ್ಯಾಯಾಲಯ ನಿಮಗೆ ದೀರ್ಘಾವಧಿ ಸಮಯ ನೀಡುತ್ತಿದೆ. ಆದರೆ ನ್ಯಾಯಾಲಯ ಮುಂದೆಯೂ ಅದನ್ನು ಮಾಡುತ್ತದೆ ಎಂದು ನಿರೀಕ್ಷಿಸಬೇಡಿ’ ಎಂದು ಟ್ವಿಟರ್‌ಗೆ ಎಚ್ಚರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.