ADVERTISEMENT

ಮಧ್ಯಪ್ರದೇಶದ ರುಂಜ್ ನದಿಯಲ್ಲೂ ಕಾಣಿಸಿಕೊಂಡ ಶವಗಳು

ಪಿಟಿಐ
Published 12 ಮೇ 2021, 13:04 IST
Last Updated 12 ಮೇ 2021, 13:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಭೋ‍ಪಾಲ್: ಬಿಹಾರ ಮತ್ತು ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಹೆಣಗಳು ತೇಲಿಕೊಂಡ ಬೆನ್ನಲ್ಲೇ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ನಂದನಪುರ ಗ್ರಾಮದ ರುಂಝ್ ನದಿಯಲ್ಲಿ ಎರಡು ಶವಗಳು ಪತ್ತೆಯಾಗಿವೆ.

ನದಿಯಲ್ಲಿ ಆರು ಶವಗಳು ಪತ್ತೆಯಾಗಿವೆ ಎನ್ನುವ ಕೆಲ ವರದಿಗಳನ್ನು ಅಲ್ಲಗಳೆದಿರುವ ಅಧಿಕಾರಿಗಳು, ಎರಡು ಶವಗಳಷ್ಟೇ ಪತ್ತೆಯಾಗಿವೆ ಎಂದು ಬುಧವಾರ ತಿಳಿಸಿದ್ದಾರೆ.

ಶವಗಳ ವಾರಸುದಾರರ ಕುಟುಂಬಗಳು ಸತ್ತವರಿಗೆ ಕೋವಿಡ್‌–19 ಸೋಂಕು ಇರಲಿಲ್ಲ ಎಂದು ಸ್ಪಷ್ಟಪಡಿಸಿವೆ.

ADVERTISEMENT

‘ಮೇ 11ರಂದು ನದಿಯಲ್ಲಿ ಶವಗಳು ತೇಲಿಕೊಂಡು ಬಂದಿವೆ ಎನ್ನುವ ಸುದ್ದಿ ತಿಳಿದ ಬಳಿಕ ಅಧಿಕಾರಿಗಳ ತಂಡ ಮತ್ತು ಪೊಲೀಸರು ರುಂಝ್ ನದಿದಡದಲ್ಲಿನ ಕಾಳಿ ಘಾಟ್‌ಗೆ ಭೇಟಿ ನೀಡಿದ್ದಾರೆ’ ಎಂದು ಪನ್ನಾ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

‘ನದಿಯಲ್ಲಿ ಪತ್ತೆಯಾದ ಶವಗಳನ್ನು ಶಿವರಾಂ ಅಹಿರ್‌ವರ್ (90) ಹಾಗೂ ಕಲ್ಲು ಅಹಿರ್‌ವರ್ (75) ಎಂದು ಗುರುತಿಸಲಾಗಿದ್ದು, ಇಬ್ಬರೂ ಬೆಹರ್‌ಸರ್‌ವಾರಿಯಾ ಗ್ರಾಮದವರು ಎನ್ನಲಾಗಿದೆ. ಕಾಯಿಲೆಗಳಿಂದ ಬಳಲುತ್ತಿದ್ದ ಇವರಿಬ್ಬರೂ ಕ್ರಮವಾಗಿ ಮೇ 5 ಮತ್ತು ಮೇ 8ರಂದು ಸಾವಿಗೀಡಾಗಿದ್ದರು. ಸ್ಥಳೀಯ ಸಂಪ್ರದಾಯದಂತೆ ಅನಾರೋಗ್ಯ ಪೀಡಿತರಾಗಿ ಮೃತರಾಗಿದ್ದವರ ದೇಹಗಳನ್ನು ಸಂಬಂಧಿಕರು ನದಿಯಲ್ಲಿ ಬಿಟ್ಟಿದ್ದರು’ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ಗ್ರಾಮಸ್ಥರು ಹಾಗೂ ಇಬ್ಬರ ಕುಟುಂಬ ಸದಸ್ಯರ ಪ್ರಕಾರ ಶಿವರಾಂ ಮತ್ತು ಕಲ್ಲು ಇಬ್ಬರೂ ಕೋವಿಡ್‌ ಪೀಡಿತರಾಗಿರಲಿಲ್ಲ. ಶಿವಾರಂ ಅವರಿಗೆ ಚರ್ಮದ ಕಾಯಿಲೆಗಳಿದ್ದರೆ, ಕಲ್ಲು ಅವರಿಗೆ ಕ್ಯಾನ್ಸರ್ ಇತ್ತು. ಕಾನೂನು ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಹಾಗೂ ಸಂಬಂಧಿಕರ ಒಪ್ಪಿಗೆ ಪಡೆದ ಬಳಿಕ ಶವಗಳನ್ನು ನದಿ ಸಮೀಪದಲ್ಲೇ ಹೂಳಲಾಯಿತು ಎಂದೂ ತಿಳಿಸಿದ್ದಾರೆ.

ರುಂಝ್ ನದಿಯು ಮಧ್ಯಪ್ರದೇಶದಿಂದ ಉತ್ತರ ಪ್ರದೇಶದತ್ತ ಹರಿಯುತ್ತದೆ. ಹಾಗಾಗಿ, ಶವಗಳು ಉತ್ತರ ಪ್ರದೇಶದಿಂದ ತೇಲಿಕೊಂಡು ಬಂದಿರುವ ಸಾಧ್ಯತೆಯೇ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

‘ನದಿಯಲ್ಲಿ ಆರು ಶವಗಳು ಪತ್ತೆಯಾಗಿವೆ. ಈ ಬಗ್ಗೆ ತನಿಖೆ ನಡೆಯಬೇಕು’ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಕಮಲ್‌ನಾಥ್ ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ. ಮತ್ತೊಂದೆಡೆ ‘ಇದು ಯಾವ ರೀತಿಯ ಶವರಾಜ್’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.