ADVERTISEMENT

ದೆಹಲಿ ಕಾಂಗ್ರೆಸ್‌ನ ಉಪಾಧ್ಯಕ್ಷ, ಇಬ್ಬರು ಹೊಸ ಕೌನ್ಸಿಲರ್‌ಗಳು ಎಎಪಿಗೆ

ಐಎಎನ್ಎಸ್
Published 9 ಡಿಸೆಂಬರ್ 2022, 14:52 IST
Last Updated 9 ಡಿಸೆಂಬರ್ 2022, 14:52 IST
   

ನವದೆಹಲಿ: ಹೊಸದಾಗಿ ಚುನಾಯಿತರಾದ ಕಾಂಗ್ರೆಸ್‌ನ ಇಬ್ಬರು ಕೌನ್ಸಿಲರ್‌ಗಳಾದ ಸಬಿಲಾ ಬೇಗಂ ಮತ್ತು ನಾಜಿಯಾ ಖಾತೂನ್ ಅವರು ಕಾಂಗ್ರೆಸ್‌ನ ದೆಹಲಿ ಘಟಕದ ಉಪಾಧ್ಯಕ್ಷ ಅಲಿ ಮೆಹದಿ ಅವರೊಂದಿಗೆ ಶುಕ್ರವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಯಾಗಿದ್ದಾರೆ.

ಮೆಹದಿ ಜೊತೆಗೆ ನೂರಾರು ಕಾಂಗ್ರೆಸ್ ನಾಯಕರು ಕೂಡ ಎಎಪಿ ಸೇರಿದರು.

ಎಎಪಿ ಶಾಸಕ ದುರ್ಗೇಶ್ ಪಾಠಕ್ ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡರು.

ADVERTISEMENT

‘ಎಂಸಿಡಿ (ದೆಹಲಿ ಮುನ್ಸಿಪಲ್‌ ಕಾರ್ಪೊರೇಷನ್‌)ಯಲ್ಲಿ 15 ವರ್ಷ ಆಡಳಿತ ನಡೆಸಿರುವ ಬಿಜೆಪಿ ಭ್ರಷ್ಟಾಚಾರ ಮಾಡಿ ನಗರವನ್ನು ಅಧೋಗತಿಗೆ ಕೊಂಡೊಯ್ದಿದೆ. ಅವರು ಪಾಲಿಕೆಯನ್ನು ಹದಗೆಡಿಸಿದ್ದಾರೆ. ಎಎಪಿಗೆ ಬಹುಮತ ನೀಡಿದ್ದಕ್ಕಾಗಿ ನಾನು ನಗರದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ದೆಹಲಿಯನ್ನು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದಾಗಿ ಮಾಡಲು ನಾವು ಬಯಸುತ್ತೇವೆ’ ಎಂದು ದುರ್ಗೇಶ್ ಪಾಠಕ್ ಹೇಳಿದರು.

‘ಇಂದು, ನಾವು ದೆಹಲಿಯ ಪ್ರಮುಖ ನಾಯಕ ಅಲಿ ಮೆಹದಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ. ಇಲ್ಲಿಯವರೆಗೆ, ಅವರು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಅದಕ್ಕೂ ಮೊದಲು ಅವರು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿದ್ದರು. ಅವರಲ್ಲದೆ, ಇತ್ತೀಚೆಗೆ ಚುನಾವಣೆಯಲ್ಲಿ ಗೆದ್ದ ಎಂಸಿಡಿಯ ಕೌನ್ಸಿಲರ್‌ಗಳೂ ಎಎಪಿ ಸೇರಿದ್ದಾರೆ,’ ಎಂದು ಪಾಠಕ್‌ ಹೇಳಿದರು.

‘ಎಎಪಿಗೆ ಸೇರಲು ನಾವು ಹೆಮ್ಮೆಪಡುತ್ತೇವೆ. ಅರವಿಂದ್ ಕೇಜ್ರಿವಾಲ್ ಕಾರ್ಯವನ್ನು ಜನ ಮೆಚ್ಚಿದ್ದಾರೆ. ದೆಹಲಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಅವರೊಂದಿಗೆ ಕೈಜೋಡಿಸುತ್ತಿದ್ದೇವೆ’ ಎಂದು ಮೆಹದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.