ADVERTISEMENT

ನಿರ್ಲಕ್ಷ್ಯದ ಆರೋಪ: ಯುಪಿಯ ಇಬ್ಬರು ಕಾಂಗ್ರೆಸ್ ನಾಯಕರ ರಾಜೀನಾಮೆ

ಪಿಟಿಐ
Published 30 ಆಗಸ್ಟ್ 2021, 10:31 IST
Last Updated 30 ಆಗಸ್ಟ್ 2021, 10:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಲ್ಲಿಯಾ, ಉತ್ತರ ಪ್ರದೇಶ: ಹಳೆಯ ಮತ್ತು ನಿಷ್ಠಾವಂತ ನಾಯಕರನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಇಬ್ಬರು ಹಿರಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಶೈಲೇಂದ್ರ ಸಿಂಗ್ ಮತ್ತು ರಾಜೇಶ್ ಸಿಂಗ್ ತಮ್ಮ ರಾಜೀನಾಮೆ ಪತ್ರವನ್ನು ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ಕುಮಾಲ್ ಲಲ್ಲು ಅವರಿಗೆ ಭಾನುವಾರ ರವಾನಿಸಿದ್ದಾರೆ. ಈ ವಿಚಾರವನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೇರಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೂ ತಿಳಿಸಿರುವುದಾಗಿ ಉಭಯ ನಾಯಕರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷರನ್ನು ಗುರಿಯಾಗಿಸಿಕೊಂಡು ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಶೈಲೇಂದ್ರ ಸಿಂಗ್, ಲಲ್ಲು ಅಧಿಕಾರ ವಹಿಸಿಕೊಂಡ ನಂತರ ನಿಷ್ಠಾವಂತ ಮತ್ತು ಹಿರಿಯ ಕಾಂಗ್ರೆಸ್ ಸದಸ್ಯರನ್ನು ನಿರ್ಲಕ್ಷಿಸಲಾಗಿದೆ. ಇದೇ ಕಾರಣಕ್ಕಾಗಿಯೇ ಸಮರ್ಥ ನಾಯಕರು ಪಕ್ಷವನ್ನು ತೊರೆಯುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಪಕ್ಷದ ಪರಿಸ್ಥಿತಿಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಹಲವು ಬಾರಿ ತಿಳಿಸಿದ್ದೇನೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದರು.

ತಾನು ವಿದ್ಯಾರ್ಥಿ ದಿನಗಳಿಂದಲೂ ಕಾಂಗ್ರೆಸ್‌ನ ಸಕ್ರಿಯ ಸದಸ್ಯನಾಗಿದ್ದೇನೆ ಮತ್ತು ಕಳೆದ 25 ವರ್ಷಗಳಿಂದ ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ತಾನು ಎಐಸಿಸಿಯ ಚುನಾಯಿತ ಸದಸ್ಯರಾಗಿದ್ದೆ. ಆದರೆ ಕಾಂಗ್ರೆಸ್‌ನಲ್ಲಿ ಸದ್ಯದ ವಾತಾವರಣ ಮತ್ತು ಹಳೆಯ ಕಾಂಗ್ರೆಸ್ ಸದಸ್ಯರ ನಿರ್ಲಕ್ಷ್ಯದಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೇಶ್ ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇಬ್ಬರು ನಾಯಕರು ಮಾಡಿರುವ ಆರೋಪಗಳು ಆಧಾರರಹಿತ ಎಂದು ಬಣ್ಣಿಸಿರುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮತ್ತು ಅಲಹಾಬಾದ್ ಉಸ್ತುವಾರಿ ರಾಘವೇಂದ್ರ ಪ್ರತಾಪ್ ಸಿಂಗ್, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಲಲ್ಲು ಅವರ ನಾಯಕತ್ವದಲ್ಲಿ 'ನ್ಯಾಯ ಪಂಚಾಯತ್' ಮತ್ತು ಬೂತ್ ಮಟ್ಟದಿಂದ ಕಾಂಗ್ರೆಸ್ ಅನ್ನು ಬಲಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷ ಓಂ ಪ್ರಕಾಶ್ ಪಾಂಡೆ ಮಾತನಾಡಿ, ಇಬ್ಬರು ನಾಯಕರು ರಾಜ್ಯ ನಾಯಕತ್ವದೊಂದಿಗೆ ವೈಮನಸ್ಯ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.