ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯ ರಾಮಮಂದಿರದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಹರಿಯಾಣದ ಇಬ್ಬರು ಭಕ್ತರು ಸೋಮವಾರ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಾಲ್ತುಳಿತದಿಂದ ಅವರು ಸಾವಿಗೀಡಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆಯಾದರೂ, ಪೊಲೀಸರು ಈ ವದಂತಿಯನ್ನು ತಳ್ಳಿಹಾಕಿದ್ದಾರೆ.
ಓರ್ವ ಮಹಿಳೆ ಮತ್ತು ಪುರುಷ ದೇವಸ್ಥಾನದ ಹೊರಗೆ ಮೂರ್ಛೆ ಹೋಗಿದ್ದರು. ಅವರನ್ನು ಶ್ರೀ ರಾಮ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಿಬ್ಬರೂ 60 ವರ್ಷಕ್ಕಿಂತ ಮೇಲ್ಪಟ್ಟವರು. ಅವರು ಗುರುತು ಇನ್ನೂ ಪತ್ತೆಯಾಗಿಲ್ಲ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೃದಯ ಸ್ತಂಭನದಿಂದ ಅವರು ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ನೂಕು ನುಗ್ಗಲಿನಿಂದ ಇಬ್ಬರು ಭಕ್ತರು ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕೆಲವರು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಇದು ತಪ್ಪುದಾರಿಗೆಳೆಯುವ ಪ್ರಯತ್ನ. ಅಂತಹದ್ದೇನೂ(ಕಾಲ್ತುಳಿತ) ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭದಿಂದ ಹಿಂದಿರುಗಿದ ಅನೇಕರು ರಾಮಲಲ್ಲಾಗೆ ಪೂಜೆ ಸಲ್ಲಿಸಲು ಸೋಮವಾರ ಅಯೋಧ್ಯೆಗೆ ಆಗಮಿಸಿದ್ದರು. ಈ ವೇಳೆ ಜನದಟ್ಟಣೆ ಉಂಟಾಗಿತ್ತು. ಭಾರಿ ಜನದಟ್ಟಣೆಯಿಂದಾಗಿ ಹನುಮಾನ್ ಗಡಿ ಮತ್ತು ರಾಮ ಮಂದಿರಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.