ADVERTISEMENT

ಮಹಾರಾಷ್ಟ್ರ ಪೊಲೀಸರಿಗೆ ಶರಣಾದ ಇಬ್ಬರು ಕುಖ್ಯಾತ ನಕ್ಸಲರು

ಪಿಟಿಐ
Published 12 ಮೇ 2022, 14:24 IST
Last Updated 12 ಮೇ 2022, 14:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನಾಗ್ಪುರ: ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಲ್ಲಿ ಹಲವು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ನಕ್ಸಲರು ಮಹಾರಾಷ್ಟ್ರದ ಗಡ್‌ಚಿರೊಲಿ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಶರಣಾದ ನಕ್ಲಲರ ಪೈಕಿ ಒಬ್ಬ ಮಹಿಳೆಯೂ ಇದ್ದು, ಇವರಿಬ್ಬರ ತಲೆಗೆ ₹ 12 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಛತ್ತಿಸ್‌ಗಡ ರಾಜ್ಯಕ್ಕೆ ಹೊಂದಿಕೊಂಡಿರುವ ನಾರಾಯಣಪುರ ಜಿಲ್ಲೆಯ ನಿವಾಸಿ ಕೋಳು ಅಲಿಯಾಸ್ ವಿಕಾಸ್ ಅಲಿಯಾಸ್ ಸುಖಾಂತ್ ವಿನೋದ್ ಪದ(27), ಮಹಾರಾಷ್ಟ್ರದ ಗಡ್‌ಚಿರೋಲಿಯ ನಿವಾಸಿ ರಾಜೆ ಅಲಿಯಾಸ್ ದೆಬೊ ಜಯರಾಮ್ ಉಸೆಂಡಿ(30) ಶರಣಾದ ನಕ್ಸಲರು.

ADVERTISEMENT

ವಿಕಾಸ್ ತಲೆಗೆ ₹ 8 ಲಕ್ಷ ಮತ್ತು ಉಸೆಂಡಿ ತಲೆಗೆ ₹ 4 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು.

ಸೆಪ್ಟೆಂಬರ್ 2010ರಲ್ಲಿ ನಕ್ಸಲಿಸಂಗೆ ಸೇರಿದ್ದ ವಿಕಾಸ್, ಮಾವೊವಾದಿಗಳ ಕೇಂದ್ರ ಸಮಿತಿ ಸದಸ್ಯ ಸುಧಾಕರ್ ಅವರಿಗೆ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದ. ಕೊಲೆ, ಗುಂಡಿನ ದಾಳಿ ಮತ್ತು ದರೋಡೆಗೆ ಸಂಬಂಧಿಸಿದಂತೆ ಒಂದು ಡಜನ್‌ಗಿಂತಲೂ ಹೆಚ್ಚು ಪ್ರಕರಣ ಈತನ ಮೇಲೆ ದಾಖಲಾಗಿದ್ದವು. ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡದಲ್ಲಿ ಭದ್ರತಾ ಪಡೆಗಳ ವಿರುದ್ಧ ಮೂರು ಸ್ಫೋಟಗಳನ್ನು ನಡೆಸಿರುವ ಈತ ಒಡಿಶಾದ ಹಲವು ಶೂಟೌಟ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಗಡ್‌ಚಿರೋಲಿಯ ಪೊಯಾರ್‌ಕೋಟಿ ಅರಣ್ಯ ವಲಯದಲ್ಲಿ 2020ರಲ್ಲಿ ಈತ ನಡೆಸಿದ್ದ ಸ್ಫೋಟದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದರು.

2011ರಲ್ಲಿ ನಕ್ಸಲಿಸಂ ಸೇರಿದ ಉಸೆಂಡಿ, 2020ರ ಪೊಯಾರ್‌ಕೋಟಿ ಅರಣ್ಯ ವಲಯದಲ್ಲಿ ನಡೆಸಿದ ಸ್ಫೋಟದಲ್ಲಿ ವಿಕಾಸ್ ಜೊತೆ ಕೈಜೋಡಿಸಿದ್ದರು. 2019ರಲ್ಲಿ ಗ್ರಾಮಸ್ಥನ ಹತ್ಯೆ ಸೇರಿ ಹಲವು ಪ್ರಕರಣಗಳಲ್ಲಿ ಈಕೆ ಭಾಗಿಯಾಗಿದ್ದಾರೆ. ಮಾವೋವಾದಿ ಗುಂಪಿನ ಹಿರಿಯರಿಂದ ಮಹಿಳೆಯರ ಶೋಷಣೆ, ಮೂಲಭೂತ ಸೌಕರ್ಯ ನೀಡುವಾಗ ಹಿರಿಯ ಮತ್ತು ಕಿರಿಯ ನಕ್ಸಲರೆಂಬ ತಾರತಮ್ಯ, ಅರಣ್ಯದಲ್ಲಿ ಕಠಿಣ ಜೀವನ, ಕಾಡುಪ್ರಾಣಿಗಳ ಭಯ ಇವೇ ಮುಂತಾದ ಕಾರಣಗಳಿಂದಾಗಿ ಮಹಾರಾಷ್ಟ್ರದ ಶರಣಾಗತಿ ನಿಯಮಕ್ಕೆ ಬದ್ಧರಾಗಿ ಶರಣಾಗಿರುವುದಾಗಿ ನಕ್ಸಲರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.