ಸಾಂದರ್ಭಿಕ ಚಿತ್ರ
ಮಧುರೈ: ತಮಿಳುನಾಡಿನ ಮಧುರೈನ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
‘ಮೃತ ವಿದ್ಯಾರ್ಥಿನಿಯರನ್ನು ಪರಿಮಳಾ ಹಾಗೂ ಶರಣ್ಯಾ ಎಂದು ಗುರುತಿಸಲಾಗಿದೆ. ಘಟನೆಯು ಗುರುವಾರ ಮುಂಜಾನೆ ನಡೆದಿದೆ. ಸ್ಫೋಟದ ಬೀಕರತೆಗೆ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡು, ಹೊಗೆ ಆವರಿಸಿತ್ತು. ಒಳಗಿದ್ದವರನ್ನು ರಕ್ಷಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮಧುರೈ ಜಿಲ್ಲಾಧಿಕಾರಿ ಎಂ.ಎಸ್. ಸಂಗೀತಾ ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಾಹಿತಿ ತಂತ್ರಜ್ಞಾನ ಸಚಿವ ಪಿ. ತೈಗರಾಜನ್, ‘ವಿದ್ಯಾರ್ಥಿನಿಯರಿಗೆ ಪರ್ಯಾಯ ವಸತಿ ಕಲ್ಪಿಸಲಾಗುವುದು. ಘಟನೆ ಕುರಿತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.
ತಾತ್ಕಾಲಿಕ ಆಶ್ರಯ ತಾಣಕ್ಕೆ ಭೇಟಿ ನೀಡಿದ ತೈಗರಾಜನ್, ವಿದ್ಯಾರ್ಥಿನಿಯರೊಂದಿಗೆ ಸಮಾಲೋಚನೆ ನಡೆಸಿದರು. ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು. ಘಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
‘ಕಟ್ಟಡ ಹಳೆಯದಾಗಿದ್ದು, ಶಿಥಿಲಗೊಂಡಿತ್ತು. ಕಟ್ಟಡ ನೆಲಸಮಗೊಳಿಸಲು ಸ್ಥಳೀಯ ಸಂಸ್ಥೆ ನೋಟಿಸ್ ನೀಡಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿದೆ. ದಾಖಲೆಗಳನ್ನು ಪರಿಶೀಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.