ADVERTISEMENT

ಜಮ್ಮು–ಕಾಶ್ಮೀರ: ಲಷ್ಕರ್ ಉಗ್ರರ ಹತ್ಯೆ

ಪಿಟಿಐ
Published 1 ನವೆಂಬರ್ 2018, 16:15 IST
Last Updated 1 ನವೆಂಬರ್ 2018, 16:15 IST

ಶ್ರೀನಗರ: ಜಮ್ಮು–ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಗಾಯಗೊಂಡಿದ್ದಾರೆ.

ಖಾನ್‌ಸಾಹಿಬ್ ಪ್ರದೇಶದ ಝಗೂ ಎಂಬಲ್ಲಿ ಉಗ್ರರು ಇದ್ದಾರೆ ಎಂಬ ಖಚಿತ ಸುಳಿವನ್ನು ಆಧರಿಸಿ ಭದ್ರತಾ ಪಡೆಗಳು ಶೋಧ ಕೈಗೊಂಡಿದ್ದವು. ಇದನ್ನು ಅರಿತ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದರು. ಯೋಧರೂ ತಕ್ಕ ಪ್ರತ್ಯುತ್ತರ ನೀಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹತ್ಯೆಯಾದ ಮುಖ್ತಾರ್ ಅಹ್ಮದ್ ಖಾನ್‌ ಬದ್ಗಾಮ್‌ನ ಅರಿಜಾಲ್‌ ನಿವಾಸಿ. ಮತ್ತೊಬ್ಬ ಉಗ್ರ ಮೊಹಮ್ಮದ್ ಅಮೀನ್ ಪುಲ್ವಾಮಾ ಜಿಲ್ಲೆಯ ಪಾಂಪೊರ್ ನಿವಾಸಿ. ಇಬ್ಬರೂ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕಲ್ಲುತೂರಾಟ: ಬದ್ಗಾಮ್‌ನಲ್ಲಿ ನಡೆದ ಕಲ್ಲುತೂರಾಟದ ವೇಳೆ ಸುದ್ದಿವಾಹಿನಿಯೊಂದರ ಒ.ಬಿ ವ್ಯಾನ್‌ (ಔಟ್‌ಡೋರ್ ಬ್ರಾಡ್‌ಕಾಸ್ಟಿಂಗ್) ಹಾನಿಗೊಂಡಿದೆ. ವಾಹಿನಿಯ ಸಿಬ್ಬಂದಿ ಇದ್ದ ವ್ಯಾನ್‌ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಎನ್‌ಕೌಂಟರ್ ಸುದ್ದಿಗಾಗಿ ತೆರಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.