ADVERTISEMENT

ದೆಹಲಿಯಲ್ಲಿ ಸುಳ್ಳು ವದಂತಿ ಹರಡಿದ ಹಿನ್ನೆಲೆ: ಇಬ್ಬರನ್ನು ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 1:35 IST
Last Updated 2 ಮಾರ್ಚ್ 2020, 1:35 IST
ದೆಹಲಿ ಪೊಲೀಸರು
ದೆಹಲಿ ಪೊಲೀಸರು   

ನವದೆಹಲಿ: ಆಗ್ನೇಯ ಮತ್ತು ಪಶ್ಚಿಮ ದೆಹಲಿಯಲ್ಲಿ ಸುಳ್ಳು ವದಂತಿಗಳನ್ನು ಹಬ್ಬಿಸಿ ಜನರ ಆತಂಕಕ್ಕೆ ಕಾರಣವಾಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ದೆಹಲಿ ಪೊಲೀಸರು ನಗರದಲ್ಲಿ ಯಾವುದೇ ರೀತಿಯ ಅಶಾಂತಿ ಅಥವಾ ಗೊಂದಲಗಳಿಲ್ಲ ಸ್ಪಷ್ಟಪಡಿಸಿದ್ದಾರೆ.

ಕೆಲ ಸಮಾಜ ವಿರೋಧಿ ಶಕ್ತಿಗಳು ಸುಳ್ಳುಗಳನ್ನು ಹರಡಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಜನರಲ್ಲಿ ಗಾಬರಿ ಹುಟ್ಟಿಸುವುದು ಉದ್ದೇಶಪೂರ್ವಕ ತಂತ್ರದ ಭಾಗವಾಗಿದ್ದು, ಈ ತರಹದ ವದಂತಿ ಹರಡುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ನಿಗಾ ಇಡುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವದಂತಿಗಳಿಂದ ಭಯಭೀತರಾದ ಆಗ್ನೇಯ ಮತ್ತು ಪಶ್ಚಿಮ ಭಾಗದ ನಿವಾಸಿಗಳು ಪೊಲೀಸ್ ಸಹಾಯವಾಣಿಗೆ ಕರೆ ಮಾಡಲು ಆರಂಭಿಸಿದ ನಂತರ ಪೊಲೀಸರು ಈ ನಿಟ್ಟಿನಲ್ಲಿ ಜಾಗೃತರಾಗಿದ್ದಾರೆ.

ದೆಹಲಿಯ ನಂಗ್ಲೋಯಿ, ಸುರಜ್‌ಮಾಲ್‌, ಸ್ಟೇಡಿಯಂ, ಬಡಾಪುರ್‌, ತುಘಲಕ್‌ಬಾದ್‌. ಉತ್ತಮ್‌ ನಗರ (ಪಶ್ಚಿಮ), ನವಡಾ ಮತ್ತು ಪಟೇಲ್‌ ನಗರ ಮೆಟ್ರೊ ರೈಲು ನಿಲ್ದಾಣಗಳನ್ನು ಕೆಲ ಸಮಯ ಕಾಲ ಮುಚ್ಚಲು ಈ ವದಂತಿಗಳು ಕಾರಣವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.