ADVERTISEMENT

ಪುಲ್ವಾಮಾ: ಇಬ್ಬರು ಉಗ್ರರು ಬಲಿ, ಒಬ್ಬ ನಾಗರಿಕ ಸಾವು, ಸೇನೆಯ ನಾಲ್ವರು ಹುತಾತ್ಮ

ಏಜೆನ್ಸೀಸ್
Published 18 ಫೆಬ್ರುವರಿ 2019, 7:11 IST
Last Updated 18 ಫೆಬ್ರುವರಿ 2019, 7:11 IST
   

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿರುವ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ದೇಹಗಳನ್ನು ವಶಕ್ಕೆ ಪಡೆದು ಗುರುತು ಪತ್ತೆ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ.

ಆತ್ಮಾಹುತಿ ದಾಳಿ ನಡೆಸಿ 40 ಸಿಆರ್‌ಪಿಎಫ್‌ ಸಿಬ್ಬಂದಿ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಸಂಬಂಧ ಹೊಂದಿದ್ದಾನೆ ಎನ್ನಲಾಗುತ್ತಿರುವ ಜೈಷ್‌ ಇ–ಮೊಹಮ್ಮದ್‌ ಉಗ್ರ ಸಂಘಟನೆ ಪ್ರಮುಖ ಕಮಾಂಡರ್‌ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಸಿಲುಕಿದ್ದಾನೆ ಎಂದು ಎಎನ್‌ಐ ವರದಿ ಮಾಡಿದೆ. ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಸುತ್ತುವರಿದಿವೆ. ಹನ್ನೆರಡು ಗಂಟೆಗಳಿಂದ ಸತತ ಕಾರ್ಯಾಚರಣೆ ನಡೆಯುತ್ತಿದೆ.

ಸೇನೆಯ ಕಾರ್ಯಾಚರಣೆಯಲ್ಲಿ ಪುಲ್ವಾಮಾ ಸ್ಫೋಟದ ಮಾಸ್ಟರ್‌ ಮೈಂಡ್‌ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.

ADVERTISEMENT

ಪಿಂಗಿಲಾನಾ ಗ್ರಾಮದಲ್ಲಿ ಉಗ್ರರ ವಿರುದ್ಧದ ಗುಂಡಿನ ಚಕಮಕಿ ವೇಳೆ ಸೇನೆಯ ಮೇಜರ್‌ ವಿ.ಎಸ್‌.ಧೌಂಡಿಯಾಳ್‌, ಹವಾಲ್ದಾರ್‌ ಶಿಯೊ ರಾಮ್‌, ಸಿಪಾಯಿ ಅಜತ್‌ ಕುಮಾರ್‌ ಹಾಗೂ ಸಿಪಾಯಿ ಹರಿ ಸಿಂಗ್‌ ಹುತಾತ್ಮರಾಗಿದ್ದಾರೆ. ಹುತಾತ್ಮರು ಭಾರತೀಯ ಸೇನೆಯ 55 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದವರಾಗಿದ್ದಾರೆ. ಒಬ್ಬ ನಾಗರಿಕ ಸಹ ಮೃತಪಟ್ಟಿದ್ದಾರೆ.

ಗುಂಡಿನ ಚಕಮಕಿ ಹೆಚ್ಚಿದ್ದು, ಗ್ರಾಮಸ್ಥರು ಮನೆಯಿಂದ ಹೊರ ಬರದಂತೆ ಸೂಚಿಸಲಾಗುತ್ತಿದೆ. ಉಗ್ರರು ಅಡಗಿರುವ ಮನೆಯನ್ನು ಸ್ಫೋಟಿಸಲಾಗಿದೆ.

ಬಸ್‌ ಸಂಚಾರ ಸ್ಥಗಿತ: ಗಡಿ ನಿಯಂತ್ರಣ ರೇಖೆಯ ಪೂಂಚ್‌ನಿಂದ ರಾವಲಾಕೋಟ್‌ ಮಾರ್ಗದ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪೂಂಚ್‌ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದ್ದು, ರಾವಲಾಕೋಟ್‌ ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.