ADVERTISEMENT

ಜೋಶಿಮಠ: ವಾಲಿದ ಮತ್ತೆರಡು ಹೋಟೆಲ್‌

ಪಿಟಿಐ
Published 15 ಜನವರಿ 2023, 14:29 IST
Last Updated 15 ಜನವರಿ 2023, 14:29 IST
   

ಜೋಶಿಮಠ: ಮುಳುಗುವ ಭೀತಿಯಲ್ಲಿರುವ ಉತ್ತರಾಖಂಡದ ಭೂಕುಸಿತ ಪೀಡಿತ ಪಟ್ಟಣ ಜೋಶಿಮಠದಲ್ಲಿ ಮತ್ತೆರಡು ಹೋಟೆಲ್‌ ಕಟ್ಟಡಗಳು ಭಾನುವಾರ ಅಪಾಯಕಾರಿಯಾಗಿ ವಾಲಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹೋಟೆಲ್‌ನಿಂದ ಜನರನ್ನು ಸ್ಥಳಾಂತರಿಸಲಾಗಿದೆ.

ಅಸುರಕ್ಷಿತವೆಂದು ಕಳೆದ ವಾರ ತೆರವಿಗೆ ನಿರ್ಧರಿಸಿದ್ದ ‘ಮಲಾರಿ ಇನ್’ ಮತ್ತು ‘ಮೌಂಟ್ ವ್ಯೂ’ ಹೋಟೆಲ್‌ ಕಟ್ಟಡಗಳ ನೆಲಸಮ ಕೆಲಸ ಇನ್ನೂ ನಡೆಯುತ್ತಿದೆ. ಈ ಸ್ಥಳಕ್ಕೆ ಕೇವಲ 100 ಮೀಟರ್ ದೂರದಲ್ಲಿ ನಾಲ್ಕು ಅಡಿಗಳ ಅಂತರದಲ್ಲಿದ್ದ ‘ಸ್ನೋ ಕ್ರೆಸ್ಟ್’ ಮತ್ತು ‘ಕಾಮೆಟ್’ ಎಂಬ ಎರಡು ಹೋಟೆಲ್‌ ಕಟ್ಟಡಗಳ ಮೇಲ್ಚಾವಣಿಗಳು ಪರಸ್ಪರ ಅಂಟಿಕೊಳ್ಳುವಂತೆ ವಾಲಿವೆ.

‘ಈ ಭಾಗದಲ್ಲಿ ಶನಿವಾರ ರಾತ್ರಿಯಿಂದ ಬಿರುಕುಗಳು ಹೆಚ್ಚುತ್ತಿವೆ’ ಎಂದು ‘ಸ್ನೋ ಕ್ರೆಸ್ಟ್’ ಹೋಟಲ್‌ ಮಾಲೀಕರ ಪುತ್ರಿ ಪುಜಾ ಪ್ರಜಾಪತಿ ಹೇಳಿದರು.

ADVERTISEMENT

ಪಟ್ಟಣದ ಮಾರ್ವರಿ ಪ್ರದೇಶದ ಜೆ.ಪಿ. ಕಾಲೋನಿಯಲ್ಲಿ ನೀರಿನ ಭೂಗತ ಚಾನೆಲ್‌ ಎರಡು ದಿನಗಳ ಹಿಂದೆ ಒಡೆದ ಶಂಕೆ ಇದ್ದು, ಇದರಿಂದ ಹೊರಬರುತ್ತಿರುವ ನೀರಿನ ಹರಿವು ಹೆಚ್ಚುತ್ತಿದೆ. ಇದರ ಮೂಲದ ಬಗ್ಗೆ ತಜ್ಞರು ಈವರೆಗೆ ಖಚಿತಪಡಿಸಿಲ್ಲ. ಕೆಸರು ನೀರಿನ ನಿರ್ವಹಣೆಗೆ ನಿರಂತರ ನಿಗಾ ವಹಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ತಿಳಿಸಿದರು.

ಒಸರುತ್ತಿರುವ ನೀರಿನ ಹರಿವು ಪ್ರತಿ ನಿಮಿಷಕ್ಕೆ 190 ಲೀಟರ್‌ನಿಂದ 240 ಲೀಟರ್‌ಗೆ ಹೆಚ್ಚಳವಾಗಿದೆ. ಇದು ಆರಂಭದಲ್ಲಿ ಪ್ರತಿ ನಿಮಿಷಕ್ಕೆ 550 ಲೀಟರ್‌ ಇದ್ದದ್ದು ಜ.13ರ ವೇಳೆಗೆ 190 ಲೀಟರ್‌ಗೆ ಇಳಿದಿತ್ತು. ಈಗ ನೀರಿನ ಒಸರುವಿಕೆ ಹೆಚ್ಚುತ್ತಿದ್ದಂತೆಯೇ ಮನೆ, ಕಟ್ಟಡಗಳಿಗೆ ಹಾನಿಯೂ ತೀವ್ರವಾಗುತ್ತಿದೆ.

ರೋಪ್‌ವೇ ಮಾರ್ಗದಲ್ಲಿ ಹೆಚ್ಚಿದ ಬಿರುಕು

ಔಲಿ ರೋಪ್‌ವೇ ಮಾರ್ಗದ ಬಳಿ ಮತ್ತು ಪಟ್ಟಣದ ಭೂಕುಸಿತದ ಪ್ರದೇಶಗಳಲ್ಲಿ ವ್ಯಾಪಕ ಬಿರುಕುಗಳು ಕಾಣಿಸಿವೆ. ಮತ್ತಷ್ಟು ವಾಸದ ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ರೋಪ್‌ವೇ ಆವರಣದಲ್ಲಿ ಗೋಡೆಗಳ ಬಳಿ ನಾಲ್ಕು ಇಂಚು ಅಗಲ ಮತ್ತು 20 ಅಡಿ ಉದ್ದದ ಬಿರುಕು ಮೂಡಿದೆ ಎಂದು ರೋಪ್‌ವೇ ಎಂಜಿನಿಯರ್ ದಿನೇಶ್‌ ಭಟ್ ಹೇಳಿದ್ದಾರೆ.

ಬಿರುಕುಬಿಟ್ಟಿರುವ ಮನೆಗಳ ಸಂಖ್ಯೆ 826ಕ್ಕೆ ಏರಿದೆ. ಅಸುರಕ್ಷಿತ ವಲಯದಲ್ಲಿ 165 ಮನೆಗಳು ಇವೆ. ಭಾನುವಾರ ಮತ್ತೆ 17 ಕುಟುಂಬಗಳನ್ನು ಸ್ಥಳಾಂತರಿಸಿದ್ದು, ಈವರೆಗೆ 233 ಕುಟುಂಬ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿವೆ. ಸಂತ್ರಸ್ತರಿಗೆ ಈವರೆಗೆ ₹2.49 ಕೋಟಿ ಮಧ್ಯಂತರ ನೆರವು, ಔಷಧ, ದಿನಬಳಕೆ ಪರಿಹಾರ ಸಾಮಗ್ರಿ ನೀಡಲಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

ಭೂ ಕುಸಿತದ ಸಮಸ್ಯೆಯಿಂದ ಪಟ್ಟಣ ಪಾರುಮಾಡುವಂತೆ ಭಾನುವಾರ ಜೋಶಿಮಠದ ನರಸಿಂಗ ದೇವಾಲಯದಲ್ಲಿ ಸ್ಥಳೀಯರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಯಜ್ಞ ನಡೆಸಿದರು ಎಂದು ಬದರೀನಾಥ ದೇವಾಲಯದ ಮಾಜಿ ಅಧಿಕಾರಿ ಭುವನ್ ಉನಿಯಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.