ADVERTISEMENT

ಮಹಾರಾಷ್ಟ್ರ; 15 ದಿನಗಳಲ್ಲಿ ಮತ್ತಿಬ್ಬರು ಸಚಿವರಿಂದ ರಾಜೀನಾಮೆ: ಬಿಜೆಪಿ

ಪಿಟಿಐ
Published 8 ಏಪ್ರಿಲ್ 2021, 10:02 IST
Last Updated 8 ಏಪ್ರಿಲ್ 2021, 10:02 IST
ಚಂದ್ರಕಾಂತ್ ಪಾಟೀಲ್ (ಬಲಭಾಗ)
ಚಂದ್ರಕಾಂತ್ ಪಾಟೀಲ್ (ಬಲಭಾಗ)   

ಮುಂಬೈ: ಮುಂದಿನ ಹದಿನೈದು ದಿನಗಳಲ್ಲಿ ಮಹಾರಾಷ್ಟ್ರದ ಇನ್ನೂ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಗುರುವಾರ ಹೇಳಿದ್ದಾರೆ.

‘ನಾನು ಮುಂಬೈ ಪೊಲೀಸ್ ಇಲಾಖೆಯಲ್ಲೇ ಮುಂದುವರಿಯಲು ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್ ₹2 ಕೋಟಿ ಕೇಳಿದ್ದರು. ಮತ್ತೊಬ್ಬ ಸಚಿವ ಅನಿಲ್ ಪರಬ್‌ ಅವರು ಗುತ್ತಿಗೆದಾರರಿಂದ ಹಣ ಸಂಗ್ರಹಿಸಿ ತರುವಂತೆ ಹೇಳಿದ್ದರು‘ ಎಂಬುದಾಗಿ ಸಚಿನ್‌ ವಾಜೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ವಿವರಿಸಲಾಗಿದೆ. ಈ ಪತ್ರ ಬಹಿರಂಗಗೊಂಡ ಬೆನ್ನಲ್ಲೇ, ಚಂದ್ರಕಾಂತ್ ಪಾಟೀಲ್ ಅವರಿಂದ ಇಂಥ ಹೇಳಿಕೆ ಹೊರಬಿದ್ದಿದೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ‘ಇನ್ನು 15 ದಿನಗಳಲ್ಲಿ ಇಬ್ಬರು ರಾಜ್ಯ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಕೆಲವರು ಈ ಸಚಿವರ ವಿರುದ್ಧ ನ್ಯಾಯಾಲಯದ ಮೆಟ್ಟಲು ಏರಲಿದ್ದಾರೆ. ಆಗ ಇವರು ತಮ್ಮ ಸ್ಥಾನವನ್ನು ತ್ಯಜಿಸಬೇಕಾಗುತ್ತದೆ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಹೇಳಿದರು.

ADVERTISEMENT

ಮಾಜಿ ಗೃಹಸಚಿವ ಅನಿಲ್‌ ದೇಶ್‌ಮುಖ್ ವಿರುದ್ಧದ ಆರೋಪಗಳ ಕುರಿತು ತನಿಖೆಯ ಜೊತೆಗೇ ಸಾರಿಗೆ ಸಚಿವ ಅನಿಲ್ ಪರಬ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ತನಿಖೆಯನ್ನು ನಡೆಸುವ ಸಾಧ್ಯತೆಗಳಿವೆ ಎಂದೂ ಅಭಿಪ್ರಾಯಪಟ್ಟರು.

‘ಮಹಾರಾಷ್ಟ್ರದಲ್ಲಿನ ವಿದ್ಯಮಾನಗಳು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಸೂಕ್ತವಾಗಿವೆ‘ ಎಂದು ಅಭಿಪ್ರಾಯಪಟ್ಟ ಪಾಟೀಲ್, ‘ಇದು ನಮ್ಮ ಪಕ್ಷದ ಬೇಡಿಕೆಯಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎಲ್ಲ ವಿಚಾರಕ್ಕೂ ಕೇಂದ್ರವನ್ನು ದೂಷಿಸುವುದಾದರೆ, ರಾಜ್ಯದ ಆಡಳಿತವನ್ನು ಕೇಂದ್ರ ಸರ್ಕಾರಕ್ಕೆ ಏಕೆ ವಹಿಸಬಾರದು ಎಂದು ಕೇಳಬೇಕಾಗುತ್ತದೆ’ ಎಂದು ಪಾಟೀಲ್ ಪ್ರಶ್ನಿಸಿದರು.

‘ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ಸಿಬಿಐ ತನಿಖೆಗೆ ಆದೇಶಿದ ಬಾಂಬೆ ಹೈಕೋರ್ಟ್‌ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿರುವ ಮಾಜಿ ಸಚಿವ ಅನಿಲ್‌ದೇಶ್‌ಮುಖ್ ಒಬ್ಬ ಕಪಟಿ‘ ಎಂದು ಪಾಟೀಲ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.