ADVERTISEMENT

ಮಧ್ಯಪ್ರದೇಶ: ಬಿಜೆಪಿ ಸಚಿವನ ಸ್ವಾಗತಿಸಿದ ಕಾಂಗ್ರೆಸ್‌ ಮುಖಂಡರ ಅಮಾನತು

ಪಿಟಿಐ
Published 29 ಜುಲೈ 2024, 14:28 IST
Last Updated 29 ಜುಲೈ 2024, 14:28 IST
ಕಾಂಗ್ರೆಸ್‌ ಚಿಹ್ನೆ
ಕಾಂಗ್ರೆಸ್‌ ಚಿಹ್ನೆ   

ಭೋಪಾಲ್‌: ಮಧ್ಯಪ್ರದೇಶ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಕೈಲಾಸ್‌ ವಿಜಯ್‌ವರ್ಗೀಯ ಅವರು ಕಾಂಗ್ರೆಸ್‌ ಕಚೇರಿಗೆ ತೆರಳಿದ್ದ ವೇಳೆ ಅವರನ್ನು ಸ್ವಾಗತಿಸಿದ ಆರೋಪದ ಮೇಲೆ ಪಕ್ಷದ ಇಬ್ಬರು ಮುಖಂಡರನ್ನು ಕಾಂಗ್ರೆಸ್‌ ಅಮಾನತುಗೊಳಿಸಿದೆ.

‘ತಾಯಿಯ ಹೆಸರಿನಲ್ಲಿ ಒಂದು ಮರ’ ನೆಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅಭಿಯಾನದಲ್ಲಿ ಭಾಗವಹಿಸುವಂತೆ ಕೋರಲು ಜುಲೈ 12ರಂದು ಸಚಿವ ವಿಜಯ್‌ವರ್ಗೀಯ ಅವರು ಇಂದೋರ್‌ನ ಸ್ಥಳೀಯ ಕಾಂಗ್ರೆಸ್‌ ಕಚೇರಿಗೆ ತೆರಳಿದ್ದರು. ಈ ವೇಳೆ ಇಬ್ಬರು ಮುಖಂಡರು ಸಚಿವರ ಜೊತೆ ಹರಟೆ ಹೊಡೆದು, ಒಟ್ಟಿಗೆ ಚಹಾ, ತಿಂಡಿ ಸೇವಿಸಿದ್ದರು. ಇದರ ಬೆನ್ನಲ್ಲೇ, ಇಬ್ಬರ ವಿರುದ್ಧ ಕಾಂಗ್ರೆಸ್‌ ಶಿಸ್ತುಕ್ರಮ ಕೈಗೊಂಡಿದೆ.

‘ತಾಯಿ ಅಹಲ್ಯಾ ನಗರದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕೊಂದು, ದೇಶ– ವಿದೇಶದಲ್ಲಿ ನಾಚುವಂತೆ ಮಾಡಿ, ಇಂದೋರ್‌ನಲ್ಲಿ ಜನರ ಮತದಾನದ ಹಕ್ಕು ಕಸಿಯುವಂತೆ ಮಾಡಿದವರನ್ನೇ ಸ್ವಾಗತಿಸಿರುವುದು ಪಕ್ಷದ ತತ್ವ–ಸಿದ್ದಾಂತಕ್ಕೆ ವಿರುದ್ಧವಾಗಿದೆ’ ಎಂದು ಪಕ್ಷದ ನಗರ ಘಟಕದ ಅಧ್ಯಕ್ಷ ಸುರ್ಜಿತ್‌ ಸಿಂಗ್‌ ಛಡ್ಡಾ, ಜಿಲ್ಲಾ ಘಟಕದ ಅಧ್ಯಕ್ಷ ಸದಾಶಿವ್‌ ಯಾದವ್‌ಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ. 

ADVERTISEMENT

‘ಜುಲೈ 20ರಂದು ನೋಟಿಸ್‌ ಜಾರಿಗೊಳಿಸಿದ್ದು, ಏಳು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚನೆ ನೀಡಿತ್ತು. ಅವರು ನೀಡಿದ ಉತ್ತರ ತೃಪ್ತಿಕರವಾಗಿಲ್ಲದ ಕಾರಣ, ಅಮಾನತು ಮಾಡಲಾಗಿದೆ’ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಸಮಿತಿ ಮಾಧ್ಯಮ ವಿಭಾಗದ ಮುಖ್ಯಸ್ಥ ಮುಕೇಶ್‌ ನಾಯಕ್ ತಿಳಿಸಿದರು.

ಸಚಿವ ವಿಜಯ್‌ವರ್ಗೀಯ ಅವರು ಅಕ್ಷಯ್‌ಕಾಂತಿ ಬಾಮ್‌ ಜೊತೆಗೆ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ್ದರು. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಇಂದೋರ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಕ್ಷಯ್‌ ಕಾಂತಿ ಬಾಮ್‌ ಅವರು ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆಸರಿದು, ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.