ADVERTISEMENT

‘ದೇಶವಿಭಜನೆಗೆ ಒತ್ತಾಯಿಸಿದ್ದು ಹಿಂದೂ ಮಹಾಸಭಾ’

ಪಿಟಿಐ
Published 12 ಡಿಸೆಂಬರ್ 2019, 10:05 IST
Last Updated 12 ಡಿಸೆಂಬರ್ 2019, 10:05 IST

ನವದೆಹಲಿ:ಧರ್ಮದ ಅಧಾರದಲ್ಲಿ ದೇಶವಿಭಜನೆಗೆ ಕಾಂಗ್ರೆಸ್‌ ಕಾರಣ ಎಂದು ಅಮಿತ್ ಶಾ ಅವರ ಆರೋಪವನ್ನು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಿರಾಕರಿಸಿದೆ. ಶಾ ಅವರು ಈ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಹೇಳಿದೆ. ಜತೆಗೆ ಧರ್ಮದ ಆಧಾರದಲ್ಲಿ ದೇಶವಿಭಜನೆ ಮಾಡಲು ಒತ್ತಾಯಿಸಿದ್ದು ಹಿಂದೂ ಮಹಾಸಭಾ (ವಿಎಚ್‌ಪಿ) ಎಂದು ಕಾಂಗ್ರೆಸ್‌ ಹೇಳಿದೆ.

ರಾಜ್ಯಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್‌ ನಾಯಕರು ಈ ಮಾತು ಹೇಳಿದ್ದಾರೆ.

‘ಧರ್ಮದ ಆಧಾರದ ಮೇಲೆ ದೇಶವಿಭಜನೆ ಮಾಡಬೇಕು ಎಂದು ಕಾಂಗ್ರೆಸ್ ಎಲ್ಲೂ ಹೇಳಿಲ್ಲ. ಧರ್ಮದ ಆಧಾರದಲ್ಲಿ ಎರಡು ದೇಶಗಳು ರಚನೆ ಆಗಬೇಕು ಎಂದು ಹೇಳಿದ್ದು, ವಿ.ಡಿ.ಸಾವರ್ಕರ್ ಮತ್ತು ಹಿಂದೂ ಮಹಾಸಭಾ. ಈ ಸತ್ಯ ರಾಜ್ಯಸಭೆಯ ಕಡತದಲ್ಲಿ ದಾಖಲಾಗಬೇಕು’ ಎಂದು ಕಾಂಗ್ರೆಸ್‌ನ ಆನಂದ್‌ ಶರ್ಮಾ ಹೇಳಿದರು.

ADVERTISEMENT

‘ಸಾವರ್ಕರ್ ಮತ್ತು ಹಿಂದೂಮಹಾಸಭಾ 1937ರಲ್ಲಿ ಅಹಮದಾಬಾದ್‌ನಲ್ಲಿ ಎರಡು ದೇಶಗಳ ನೀತಿಗೆ ಸಂಬಂಧಿಸಿದಂತೆ ನಿರ್ಣಯ ಹೊರಡಿಸಿತ್ತು. ಅದನ್ನು ಬ್ರಿಟಿಷರಿಗೆ ಸಲ್ಲಿಸಲಾಗಿತ್ತು. ಇದನ್ನು ವಿರೋಧಿಸಿದ್ದ ಕಾಂಗ್ರೆಸ್ ನಾಯಕರನ್ನು ಜೈಲಿಗೆ ಹಾಕಲಾಗಿತ್ತು. ಇತಿಹಾಸದಲ್ಲಿ ಇದನ್ನು ಸ್ಪಷ್ಟವಾಗಿ ಬರೆಯಲಾಗಿದೆ’ ಎಂದು ಆನಂದ್ ಶರ್ಮಾ ವಿವರಿಸಿದರು.

‘ಅಮಿತ್ ಶಾ ಅವರು ಇತಿಹಾಸದ ಯಾವ ಪುಸ್ತಕವನ್ನು ಓದಿ, ಈ ಮಾತು ಹೇಳಿತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಸ್ವಾತಂತ್ರ್ಯಪೂರ್ವದಲ್ಲೂ ಭಾರತವು ಎರಡು ದೇಶವಾಗಿತ್ತು, ಹೀಗಾಗಿ ಧರ್ಮದ ಆಧಾರದಲ್ಲಿ ದೇಶ ವಿಭಜನೆ ಆಗಬೇಕು ಎಂಬುದು ವಿ.ಡಿ.ಸಾವರ್ಕರ್ ಮತ್ತು ಮಹಮ್ಮದ್ ಅಲಿ ಜಿನ್ನಾ ಅವರ ಪ್ರತಿಪಾದನೆಯಾಗಿತ್ತು. ಎರಡು ದೇಶಗಳ ಪರಿಕಲ್ಪನೆಯನ್ನು ಕಾಂಗ್ರೆಸ್‌ ವಿರೋಧಿಸಿತ್ತು. ಗೃಹಸಚಿವರುಕಾಂಗ್ರೆಸ್‌ನ ಮೇಲೆ ಮಾಡಿರುವ ಆರೋಪವನ್ನು ವಾಪಸ್ ಪಡೆಯಬೇಕು’ ಎಂದು ಕಾಂಗ್ರೆಸ್‌ನ ಕಪಿಲ್ ಸಿಬಲ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.