ADVERTISEMENT

ಗೋಏರ್‌ ವಿಮಾನದೊಳಗೆ ಎರಡು ಪಾರಿವಾಳ!: ಆತಂಕಗೊಂಡ ಪ್ರಯಾಣಿಕರು

ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಘಟನೆ

ಪಿಟಿಐ
Published 29 ಫೆಬ್ರುವರಿ 2020, 17:28 IST
Last Updated 29 ಫೆಬ್ರುವರಿ 2020, 17:28 IST
   

ಅಹಮದಾಬಾದ್‌: ಶುಕ್ರವಾರ ಸಂಜೆಯ 5 ಗಂಟೆಯ ವೇಳೆ ಗೋಏರ್‌ ಜಿ8 702 ವಿಮಾನದಲ್ಲಿ ಅಹಮದಾಬಾದ್‌ನಿಂದ ಜೈಪುರಕ್ಕೆ ಹೊರಡಲು ಸಜ್ಜಾಗಿದ್ದ ಪ್ರಯಾಣಿಕರಿಗೆ ಆಶ್ಚರ್ಯ ಕಾದಿತ್ತು.ವಿಮಾನ ಹಾರಾಟಕ್ಕೆ ಕೆಲ ನಿಮಿಷಗಳಷ್ಟೇ ಉಳಿದಿದ್ದಾಗ,ವಿಮಾನದ ಲಗೇಜ್‌ ಶೆಲ್ಫ್‌ ಒಳಗಿಂದ ಎರಡು ಪಾರಿವಾಳಗಳು ಹೊರಬಂದು ವಿಮಾನದೊಳಗೇ ಹಾರಾಡಿದ ಘಟನೆ ನಡೆದಿದೆ.

ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯನ್ನು ಹಲವು ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.ವಿಮಾನದ ಸಿಬ್ಬಂದಿ ಪಾರಿವಾಳಗಳನ್ನು ಹೊರಗಡೆ ಓಡಿಸಲು ಪ್ರಯತ್ನಿಸುತ್ತಿರುವ ದೃಶ್ಯ ಹಾಗೂ ಪ್ರಯಾಣಿಕರು ನಗುತ್ತಿರುವ ದೃಶ್ಯಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ಪ್ರಯಾಣಿಕರು ಹತ್ತುವ ಸಂದರ್ಭದಲ್ಲೇ ಎರಡು ಪಾರಿವಾಳಗಳು ವಿಮಾನದೊಳಗೆ ಪ್ರವೇಶಿಸಿವೆ. ನಂತರಸಿಬ್ಬಂದಿ ಇದನ್ನು ಹೊರಗೆ ಓಡಿಸಿದ್ದಾರೆ. ವಿಮಾನ ನಿಗದಿತ ಸಮಯಕ್ಕೇ ಹಾರಾಟ ಆರಂಭಿಸಿದೆ’ ಎಂದು ಪ್ರಕಟಣೆಯಲ್ಲಿ ಘಟನೆ ಕುರಿತು ಗೋಏರ್‌ ವಿಮಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪದೇ ಪದೇ ವಿಮಾನ ಹಾರಾಟಕ್ಕೆ ಅಡ್ಡಿ: ಘಟನೆ ಕುರಿತು ಅಹಮದಾಬಾದ್‌ ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಗೋಏರ್‌ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಹಕ್ಕಿ ಬಡಿಯುವುದು, ರನ್‌ವೇನಲ್ಲಿ ನಾಯಿ, ಮಂಗಗಳ ಉಪದ್ರವ ಅಧಿಕವಾಗಿದೆ ಎಂದಿದ್ದಾರೆ.

ಫೆ.18ರಂದು 131 ಪ್ರಯಾಣಿಕರಿದ್ದ ಅಹಮದಾಬಾದ್‌–ಬೆಂಗಳೂರು ಗೋಏರ್‌ ವಿಮಾನ ಟೇಕ್‌ಆಫ್‌ ಸಂದರ್ಭದಲ್ಲಿ ಹಕ್ಕಿ ಬಡಿದ ಕಾರಣ ತುರ್ತು ಭೂಸ್ಪರ್ಶ ಮಾಡಿತ್ತು. ರನ್‌ವೇನಲ್ಲಿ ಮಂಗಗಳು, ಲಂಗೂರ್‌ಗಳ ಕಾಟ ತಪ್ಪಿಸಲು ಕರಡಿ ವೇಷದಲ್ಲಿ ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ನಿಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.