ADVERTISEMENT

ವರ್ಗಾವಣೆ ರದ್ಧತಿಗೆ ತಂತ್ರ: 24 ವಿದ್ಯಾರ್ಥಿನಿಯರನ್ನು ಕೂಡಿ ಹಾಕಿದ್ದ ಶಿಕ್ಷಕರು

ಪಿಟಿಐ
Published 23 ಏಪ್ರಿಲ್ 2022, 7:39 IST
Last Updated 23 ಏಪ್ರಿಲ್ 2022, 7:39 IST
   

ಲಖಿಂಪುರ ಖೇರಿ:24 ವಿದ್ಯಾರ್ಥಿನಿಯರನ್ನು ಇಬ್ಬರು ಶಿಕ್ಷಕರು ಶಾಲೆಯ ಮೇಲ್ಛಾವಣಿಯಲ್ಲಿ ಬೀಗ ಹಾಕಿ ಕೂಡಿಹಾಕಿದ್ದ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಬೆಹ್ಜಾಮ್‌ನಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ನಡೆದಿದೆ.

ತಮ್ಮ ವರ್ಗಾವಣೆ ಆದೇಶವನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಲು ಈ ತಂತ್ರ ಮಾಡಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಹಲವು ಗಂಟೆಗಳ ನಂತರ ಹುಡುಗಿಯರನ್ನು ಹಾಸ್ಟೆಲ್‌ಗೆ ಕರೆತರುವಲ್ಲಿ ಯಶಸ್ವಿಯಾದರು.

ADVERTISEMENT

‘ಶಿಸ್ತಿನ ಆಧಾರದ ಮೇಲೆ ಕಸ್ತೂರಬಾ ಬಾಲಿಕಾ ವಿದ್ಯಾಲಯದಿಂದ ಬೇರೆಡೆಗೆ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಲು ಶಿಕ್ಷಕರು ಇಂತಹ ತಂತ್ರಗಳನ್ನು ಅನುಸರಿಸಿದ್ದಾರೆ’ಎಂದು ಲಖಿಂಪುರ ಖೇರಿಯ ಶಿಕ್ಷಣಾಧಿಕಾರಿ ಲಕ್ಷ್ಮೀಕಾಂತ ಪಾಂಡೆ ಪಿಟಿಐಗೆ ತಿಳಿಸಿದ್ದಾರೆ.

ಘಟನೆ ಕುರಿತಂತೆ ಪಾಂಡೆ ಹಾಗೂ ಶಿಕ್ಷಣ ಇಲಾಖೆಯ ಜಿಲ್ಲಾ ಸಂಯೋಜಕಿ ರೇಣು ಶ್ರೀವಾಸ್ತವ್ ಅವರಿಗೆ ಹಾಸ್ಟೆಲ್ ವಾರ್ಡನ್ ಲಲಿತ್ ಕುಮಾರಿ ಮಾಹಿತಿ ನೀಡಿದ್ದರು. ಬಳಿಕ, ಶಾಲೆಗೆ ಧಾವಿಸಿದ ಅವರು ಹಲವಾರು ಗಂಟೆಗಳ ಕಾಲ ಅಲ್ಲಿಯೇ ಮೊಕ್ಕಾಂ ಹೂಡಿದ್ದರು.

ಸ್ಥಳೀಯ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಕರೆಸಿ ಸಮಸ್ಯೆಯನ್ನು ಪರಿಹರಿಸಲಾಯಿತು ಎಂದು ಪಾಂಡೆ ಹೇಳಿದರು.

ಶಿಕ್ಷಕರಾದ ಮನೋರಮಾ ಮಿಶ್ರಾ ಮತ್ತು ಗೋಲ್ಡಿ ಕಟಿಯಾರ್ ವಿರುದ್ಧ ಐಪಿಸಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪಾಂಡೆ ಹೇಳಿದ್ದಾರೆ.

ಈ ಬಗ್ಗೆ ಇಲಾಖಾ ತನಿಖೆಗೂ ಆದೇಶಿಸಲಾಗಿದೆ. ಮೂರು ದಿನಗಳಲ್ಲಿ ಸಮಿತಿ ವರದಿ ಸಲ್ಲಿಸಲಿದೆ ಎಂದರು.

ತನಿಖೆಯಲ್ಲಿ ಶಿಕ್ಷಕರು ತಪ್ಪಿತಸ್ಥರೆಂದು ಕಂಡುಬಂದರೆ ಸೇವಾ ಒಪ್ಪಂದವನ್ನು ರದ್ದು ಮಾಡುವುದು ಸೇರಿದಂತೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪಾಂಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.