ADVERTISEMENT

ಶ್ರೀನಗರ ಹೊರವಲಯದಲ್ಲಿ ಎನ್‌ಕೌಂಟರ್: ಇಬ್ಬರು ಉಗ್ರರ ಹತ್ಯೆ

ಜುಲ್ಫಿಕರ್ ಮಜಿದ್
Published 5 ಫೆಬ್ರುವರಿ 2022, 9:17 IST
Last Updated 5 ಫೆಬ್ರುವರಿ 2022, 9:17 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಶ್ರೀನಗರ: ಶನಿವಾರ ಶ್ರೀನಗರದ ಹೊರವಲಯದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್‌–ಎ–ತೈಯಬಾ (ಎಲ್‌ಇಟಿ) ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್‌ಗೆ ಸೇರಿದ ಇಬ್ಬರು ಉಗ್ರಗಾಮಿಗಳು ಹತರಾಗಿದ್ದಾರೆ.

'ಶ್ರೀನಗರ ಪೊಲೀಸರು ಎಲ್‌ಇಟಿ/ಟಿಆರ್‌ಎಫ್‌ನ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬನಾದ ಇಖ್ಲಾಕ್ ಹಜಾಮ್ ಇತ್ತೀಚೆಗೆ ಹಸನ್‌ಪೋರಾ ಅನಂತನಾಗ್‌ನಲ್ಲಿ ಹೆಡ್ ಕಾನ್‌ಸ್ಟೆಬಲ್ ಅಲಿ ಮೊಹಮ್ಮದ್ ಗನಿ ಎಂಬುವರ ಹತ್ಯೆಯಲ್ಲಿ ಭಾಗಿಯಾಗಿದ್ದ. ಉಗ್ರರಿಂದ 2 ಪಿಸ್ತೂಲ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಶ್ರೀನಗರದ ಹೊರವಲಯದಲ್ಲಿರುವ ಜಕುರಾ ಪ್ರದೇಶವನ್ನು ಸುತ್ತುವರೆದು ಪೊಲೀಸರು ಮತ್ತು ಸಿಆರ್‌ಪಿಎಫ್ ಪಡೆಗಳು ಉಗ್ರರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಗುಂಡಿನ ಚಕಮಕಿ ನಡೆದಿತ್ತು ಎಂದು ವರದಿಗಳು ತಿಳಿಸಿವೆ.

ADVERTISEMENT

ತಲೆಮರೆಸಿಕೊಂಡಿದ್ದ ಉಗ್ರರಿಗೆ ಶರಣಾಗಲು ಅವಕಾಶ ನೀಡಲಾಗಿತ್ತು, ಆದರೆ ಅವರು ನಿರಾಕರಿಸಿ ಶೋಧನಾ ದಳದತ್ತ ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತೀಕಾರವಾಗಿ ಅಡಗಿ ಕುಳಿತಿದ್ದ ಇಬ್ಬರೂ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಜನವರಿ 29ರಂದು ಹೆಡ್ ಕಾನ್‌ಸ್ಟೆಬಲ್ ಅಲಿ ಮೊಹಮ್ಮದ್ ಗನಿ ಅವರು ಹಸನ್‌ಪೋರಾ ತಬಲಾ ಪ್ರದೇಶದಲ್ಲಿ ತಮ್ಮ ವಸತಿ ಗೃಹದ ಬಳಿ ನಿಂತಿದ್ದಾಗ ಉಗ್ರರು ಗುಂಡು ಹಾರಿಸಿ ಕೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.