ADVERTISEMENT

‘ಜೈ ಶ್ರೀರಾಮ್‌’ ಘೋಷಣೆ ಕೂಗದಂತೆ ತಡೆದ ಇಬ್ಬರು ಪ್ರಾಧ್ಯಾಪಕಿಯರ ಅಮಾನತು

ಪಿಟಿಐ
Published 21 ಅಕ್ಟೋಬರ್ 2023, 14:41 IST
Last Updated 21 ಅಕ್ಟೋಬರ್ 2023, 14:41 IST
ಅಮಾನತು (ಪ್ರಾತಿನಿಧಿಕ ಚಿತ್ರ)
ಅಮಾನತು (ಪ್ರಾತಿನಿಧಿಕ ಚಿತ್ರ)   

ಲಖನೌ: ಉತ್ತರಪ್ರದೇಶದ ಗಾಜಿಯಾಬಾದ್‌ನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ‘ಜೈ ಶ್ರೀರಾಮ್‌’ ಘೋಷಣೆ ಕೂಗದಂತೆ ತಡೆದ ಆರೋಪದಲ್ಲಿ ಇಬ್ಬರು ಹಿರಿಯ ಪ್ರಾಧ್ಯಾಪಕಿಯರನ್ನು ಅಮಾನತು ಮಾಡಲಾಗಿದೆ.

ಈ ವಿಚಾರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಯೊಬ್ಬ ವೇದಿಕೆಯಲ್ಲಿ ‘ಜೈ ಶ್ರೀರಾಮ್‌’ ಘೋಷಣೆ ಕೂಗಿದ್ದಾನೆ. ಅಲ್ಲೇ ಇದ್ದ ಇಬ್ಬರು ಪ್ರಾಧ್ಯಾಪಕಿಯರು ಅದಕ್ಕೆ ತಡೆಯೊಡ್ಡಿದ್ದಾರೆ ಮತ್ತು ಆತನನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ’ ಎಂದು ವಿವರಿಸಿವೆ.

ADVERTISEMENT

‘ಇದು ಸಾಂಸ್ಕೃತಿಕ ಕಾರ್ಯಕ್ರಮವಾಗಿರುವುದರಿಂದ ಇಂತಹ ಘೋಷಣೆ ಕೂಗಬಾರದು’ ಎಂದು ಪ್ರಾಧ್ಯಾಪಕಿಯರು ವಿದ್ಯಾರ್ಥಿಗೆ ಹೇಳಿದ್ದರು ಎಂದಿವೆ.

ಈ ಘಟನೆಯ ದೃಶ್ಯಾವಳಿಯಿರುವ ವಿಡಿಯೊವನ್ನು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಪ್ರಾಧ್ಯಾಪಕಿಯರ ನಡೆಯನ್ನು ‌ಖಂಡಿಸಿ ಕೆಲವು ಸಂಘಟನೆಗಳು ಕಾಲೇಜಿನ ಬಳಿ ಪ್ರತಿಭಟನೆ ನಡೆಸಿದ್ದವು.

ಕಾಲೇಜಿನ ಆಡಳಿತ ಮಂಡಳಿಯು ಈ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ಶಿಫಾರಸಿನಂತೆ ಪ್ರಾಧ್ಯಾಪಕಿಯರನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.