ADVERTISEMENT

ಕೇರಳ ಚಿನ್ನ ಕಳ್ಳ ಸಾಗಾಣಿಕೆ: ಯುಎಇ ದೂತಾವಾಸ ಕಚೇರಿ ಸುತ್ತ ಅನುಮಾನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 12:11 IST
Last Updated 19 ಜುಲೈ 2020, 12:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕೇರಳದಲ್ಲಿ ರಾಜತಾಂತ್ರಿಕ ಮಾರ್ಗವನ್ನು ದುರುಪಯೋಗಪಡಿಸಿಕೊಂಡು, ಅಕ್ರಮವಾಗಿ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣ ಬಯಲಾದ ಬೆನ್ನಲ್ಲೇ ತಿರುವನಂತಪುರದಲ್ಲಿರುವ ಯುಎಇ ದೂತಾವಾಸ (ಕಾನ್ಸಲೇಟ್) ಕಚೇರಿಯ ಬಗ್ಗೆ ಅನುಮಾನ ಮೂಡಿದ್ದು, ಕಚೇರಿ ಸ್ಥಾಪನೆಯೇ ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.

ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಅಗತ್ಯಗಳನ್ನು ಪೂರೈಸಲು ತಿರುವನಂತಪುರದಲ್ಲಿ ಯುಎಇ ದೂತಾವಾಸ ಕಚೇರಿ (ಕಾನ್ಸಲೇಟ್) ತೆರೆಯಬೇಕೆಂದು 2016ರಲ್ಲಿ ಕೇರಳ ಸರ್ಕಾರ ಬೇಡಿಕೆ ಸಲ್ಲಿಸಿತ್ತು.

ತಿರುವನಂತಪುರದ ಜನದಟ್ಟಣೆಯ ಪ್ರದೇಶ ಮನಕಾಡ್‌ನಲ್ಲೇ ಈ ಕಚೇರಿಯನ್ನು ಸ್ಥಾಪಿಸಲು ಸ್ಥಳ ಗುರುತಿಸಿದ್ದು ಕೂಡ ಹಲವರ ಹುಬ್ಬೇರುವಂತೆ ಮಾಡಿತ್ತು. ಮನಕಾಡ್‌ನಲ್ಲಿ ಜನರಿಗೆ ವಾಹನ ಪಾರ್ಕಿಂಗ್ ಮಾಡಲು ಯಾವುದೇ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ನಂತರ ಕೇರಳ ಸರ್ಕಾರವು ತಿರುವಾಂಕೂರು ರಾಜಮನೆತನದ ಕೌಡಿಯರ್ ಅರಮನೆಯ ಸಮೀಪ 70 ಸೆಂಟ್ಸ್ ಜಾಗವನ್ನು ಲೀಸ್ ಆಧಾರದಲ್ಲಿ ನೀಡಲು ಒಪ್ಪಿತ್ತು. ಆದರೆ, ಇಲ್ಲಿ ದೂತಾವಾಸದ ಕಚೇರಿಗೆ ಸಂಬಂಧಿಸಿದ ಕಟ್ಟಡದ ಕೆಲಸಗಳು ಮಾತ್ರ ಆಮೆವೇಗದಲ್ಲಿ ನಡೆಯುತ್ತಿವೆ.

ADVERTISEMENT

2018ರಲ್ಲಿ ಯುಎಇಯು ಉದ್ಯೋಗ ವೀಸಾ ಕಡ್ಡಾಯಗೊಳಿಸಿದ ಬಳಿಕ, ಪೊಲೀಸ್ ನಿರಕ್ಷೇಪಣಾ ಪತ್ರ (ಪಿಸಿಸಿ) ಪಡೆಯಲು ಅಭ್ಯರ್ಥಿಗಳನ್ನು ಖಾಸಗಿ ಏಜೆನ್ಸಿಗೆ ಕಳುಹಿಸುವ ಮೂಲಕ ದಾರಿತಪ್ಪಿಸಲಾಗುತ್ತಿತ್ತು ಎನ್ನುವ ಆರೋಪಗಳು ಯುಇಎ ದೂತಾವಾಸ ಕಚೇರಿಯ ಕೆಲ ಅಧಿಕಾರಿಗಳ ಮೇಲಿದೆ. ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳಲ್ಲಿ ₹ 500 ಶುಲ್ಕ ನೀಡಿದರೆ ಅಲ್ಲಿಯೇ ಪಿಸಿಸಿ ದೊರೆಯುತ್ತಿತ್ತು. ಆದರೆ, ಖಾಸಗಿ ಏಜೆನ್ಸಿಗಳು ₹ 5 ಸಾವಿರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದವು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ದೂತವಾಸದ ಅಂದಿನ ಕಾರ್ಯನಿರ್ವಾಹಕ ಕಾರ್ಯದರ್ಶಿ ಸ್ವಪ್ನಾ ಸುರೇಶ್ ಸ್ಪಷ್ಟನೆ ನೀಡಲು ನಿರಾಕರಿಸಿದ್ದರು.

ಈಗಾಗಲೇ ಚಿನ್ನದ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ದೂತಾವಾಸ ಮಾಜಿ ಉದ್ಯೋಗಿಗಳನ್ನು ಬಂಧಿಸಿರುವುದರಿಂದ ದೂತಾವಾಸ ಕಚೇರಿಯು ಗಂಭೀರ ಆರೋಪಗಳನ್ನು ಎದುರಿಸುವಂತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯವು, ಯುಎಇಯ ರಾಯಭಾರ ಕಚೇರಿಗೆ ಹಲವು ಬಾರಿ ಪತ್ರ ಬರೆದಿದೆ. ಕನಿಷ್ಠ ವಿಡಿಯೊ ಕಾನ್ಫರೆನ್ಸ್ ಮೂಲಕವಾದರೂ ವ್ಯವಹಾರಗಳಿಗೆ ಸಂಬಂಧಿಸಿದ ಹೇಳಿಕೆಗಳನ್ನು ಪಡೆಯಲು ಭಾರತದ ತನಿಖಾ ಸಂಸ್ಥೆಗಳಿಗೆ ರಾಯಭಾರ ಕಚೇರಿಯು ಸಹಕಾರ ನೀಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.