ADVERTISEMENT

UAPA case: ಪಿಎಫ್‌ಐ ಮಾಜಿ ಮುಖ್ಯಸ್ಥನಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಕಾರ

ಪಿಟಿಐ
Published 17 ಜನವರಿ 2025, 12:33 IST
Last Updated 17 ಜನವರಿ 2025, 12:33 IST
.
.   

ನವದೆಹಲಿ: ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮಾಜಿ ಮುಖ್ಯಸ್ಥ ಇ.ಅಬೂಬಕ್ಕರ್‌ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

2022ರಲ್ಲಿ ಪಿಎಫ್‌ಐ ಸಂಘಟನೆಯ ವಿರುದ್ಧ ದೇಶದಾದ್ಯಂತ ನಡೆದ ಕಾರ್ಯಾಚರಣೆ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್‌ಐಎ) ಬಂಧನಕ್ಕೆ ಒಳಗಾಗಿರುವ ಅಬೂಬಕ್ಕರ್‌ ಅವರು ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. 

ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್‌ ಮತ್ತು ರಾಜೇಶ್‌ ಬಿಂದಲ್ ಅವರಿದ್ದ ಪೀಠ, ಅಬೂಬಕ್ಕರ್‌ ಅವರಿಗೆ ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತು. ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗುವ ಸ್ವಾತಂತ್ರ್ಯವನ್ನು ಪೀಠವು ಅರ್ಜಿದಾರರಿಗೆ ನೀಡಿದೆ. 

ADVERTISEMENT

ಜಾಮೀನು ನೀಡಲು ಅಸಾಧ್ಯ ಎಂದಾದರೆ, ಅರ್ಜಿದಾರರನ್ನು ಗೃಹಬಂಧನದಲ್ಲಿ ಇರಿಸಲು ಅವಕಾಶ ನೀಡಬೇಕೆಂದು ಅಬೂಬಕ್ಕರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಅವರ ಮನವಿಯನ್ನೂ ಪೀಠ ತಿರಸ್ಕರಿಸಿತು.

ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಗೃಹಬಂಧನಕ್ಕೆ ಮನವಿ ಮಾಡುವುದು ಈಗ ಹೊಸ ಪರಿಕಲ್ಪನೆಯಾಗಿದೆ’ ಎಂದು ಹೇಳಿದರು.

ವಿಚಾರಣೆ ವೇಳೆ ಶಂಕರನಾರಾಯಣ ಅವರು ವೈದ್ಯಕೀಯ ವರದಿಯನ್ನು ಉಲ್ಲೇಖಿಸಿ, ಅರ್ಜಿದಾರರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಎನ್‌ಐಎ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್‌.ವಿ.ರಾಜು ಅವರು ಜಾಮೀನು ನೀಡುವುದನ್ನು ವಿರೋಧಿಸಿದರು. ಅರ್ಜಿದಾರರು ತಮ್ಮ ಎಲ್ಲ ಕಾಯಿಲೆಗಳಿಗೂ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಪೀಠದ ಗಮನಕ್ಕೆ ತಂದರು.

ಕಳೆದ ವರ್ಷ ಮೇ 28ರಂದು ಅಬೂಬಕ್ಕರ್‌ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ತಮಗೆ 70 ವರ್ಷವಾಗಿದ್ದು, ಪಾರ್ಕಿನ್ಸನ್‌ ಕಾಯಿಲೆ ಇದೆ. ಕ್ಯಾನ್ಸರ್‌ ಚಿಕಿತ್ಸೆಗಾಗಿ ಶಸ್ತ್ರಕ್ರಿಯೆಗೂ ಒಳಗಾಗಿದ್ದೇನೆ. ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಬಲ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಎನ್‌ಐಎ ವಿಫಲವಾಗಿದೆ ಎಂದು ಅಬೂಬಕ್ಕರ್‌ ಅವರು ಅರ್ಜಿಯಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.