ADVERTISEMENT

ಉತ್ತರಾಖಂಡ: ಸಹಜೀವನ ಸಂಬಂಧ ನೋಂದಣಿ ಕಡ್ಡಾಯ ಪ್ರಸ್ತಾವ

ಯುಸಿಸಿ ಮಸೂದೆ ಮಂಡನೆ * ಉದ್ದೇಶಿತ ಕಾಯ್ದೆ ವ್ಯಾಪ್ತಿಯಿಂದ ಬುಡಕಟ್ಟು ಸಮುದಾಯ ಹೊರಗೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 23:30 IST
Last Updated 6 ಫೆಬ್ರುವರಿ 2024, 23:30 IST
ಏಕರೂಪ ನಾಗರಿಕ ಸಂಹಿತೆ ಮಸೂದೆ ಕುರಿತು ಉತ್ತರಾಖಂಡ ವಿಧಾನಸಭೆಯಲ್ಲಿ ಮಂಗಳವಾರ ಚರ್ಚೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಡಹ್ರಾಡೂನ್‌ನಲ್ಲಿರುವ ವಿಧಾನಸಭೆ ಹೊರಗೆ ಭಾರಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿತ್ತು –ಪಿಟಿಐ ಚಿತ್ರ 
ಏಕರೂಪ ನಾಗರಿಕ ಸಂಹಿತೆ ಮಸೂದೆ ಕುರಿತು ಉತ್ತರಾಖಂಡ ವಿಧಾನಸಭೆಯಲ್ಲಿ ಮಂಗಳವಾರ ಚರ್ಚೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಡಹ್ರಾಡೂನ್‌ನಲ್ಲಿರುವ ವಿಧಾನಸಭೆ ಹೊರಗೆ ಭಾರಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿತ್ತು –ಪಿಟಿಐ ಚಿತ್ರ     

ಡೆಹ್ರಾಡೂನ್‌: ಬಹು ಚರ್ಚಿತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಉತ್ತರಾಖಂಡ ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು. 

ಸಹಜೀವನ ಸಂಬಂಧ (ಲಿವ್‌ ಇನ್‌ ಸಂಬಂಧ) ನೋಂದಣಿಯನ್ನು ಕಡ್ಡಾಯಗೊಳಿಸುವ ಈ ಪ್ರಸ್ತಾವಿತ ಕಾಯ್ದೆ ವ್ಯಾಪ್ತಿಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.

ವಿಶೇಷ ಅಧಿವೇಶನದ ಎರಡನೇ ದಿನವಾದ ಮಂಗಳವಾರ, ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಸಂವಿಧಾನದ ಮೂಲಪ್ರತಿಯನ್ನು ಹಿಡಿದುಕೊಂಡು ಸದನ ಪ್ರವೇಶಿಸಿದರು.

ADVERTISEMENT

ಕಲಾಪ ಆರಂಭಗೊಂಡ ನಂತರ, ಮುಖ್ಯಮಂತ್ರಿ ಧಾಮಿ ಅವರು ಮಸೂದೆಯನ್ನು ಮಂಡಿಸುತ್ತಿದ್ದಂತೆಯೇ ಆಡಳಿತ ಪಕ್ಷದ ಶಾಸಕರು ಮೇಜುಗಳನ್ನು ಕುಟ್ಟಿ ಸ್ವಾಗತಿಸಿದರಲ್ಲದೇ, ‘ಭಾರತ್‌ ಮಾತಾ ಕಿ ಜೈ’, ‘ವಂದೇ ಮಾತರಂ’ ಹಾಗೂ ‘ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿದರು.

ಮಸೂದೆ ಕುರಿತು ಅಧ್ಯಯನ ನಡೆಸಿ, ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸಮಯ ನೀಡುವಂತೆ ಬೇಡಿಕೆ ಮುಂದಿಟ್ಟು ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು.

‘172 ಪುಟಗಳಷ್ಟಿರುವ ಮಸೂದೆಯು 392 ಸೆಕ್ಷನ್‌ಗಳನ್ನು ಒಳಗೊಂಡಿದೆ. ಇವುಗಳ ಅಧ್ಯಯನ ನಡೆಸಲು ವಿಪಕ್ಷಗಳ ಶಾಸಕರಿಗೆ ಸಾಕಷ್ಟು ಸಮಯಾವಕಾಶ ನೀಡಬೇಕಿತ್ತು’ ಎಂದ ವಿರೋಧ ಪಕ್ಷದ ನಾಯಕ ಯಶಪಾಲ್‌ ಆರ್ಯ, ‘ಯಾವುದೇ ಚರ್ಚೆ ಇಲ್ಲದೆಯೇ, ಸಂಸದೀಯ ಸಂಪ್ರದಾಯ ಉಲ್ಲಂಘಿಸುವ ಮೂಲಕ ತರಾತುರಿಯಲ್ಲಿ ಮಸೂದೆಯನ್ನು ಅಂಗೀಕರಿಸುವುದು ಸರ್ಕಾರ ಇಚ್ಛೆಯಾಗಿರುವುಂತೆ ಕಾಣಿಸುತ್ತಿದೆ’ ಎಂದು ಟೀಕಿಸಿದರು.

ಯುಸಿಸಿ ಮಸೂದೆ ಮಂಡನೆಗೆ ಅನುಕೂಲ ಮಾಡಿಕೊಡುವ ಸಲುವಾಗಿ ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಿದ್ವ ಕಲಾಪ ಸಲಹಾ ಸಮಿತಿ ನಿರ್ಧಾರದ ವಿರುದ್ಧವೂ ವಿರೋಧ ಪಕ್ಷಗಳು ಪ್ರತಿಭಟಿಸಿದವು.

ವಿಪಕ್ಷಗಳ ಪ್ರತಿಭಟನೆಗೆ ಮಣಿದ ಸ್ಪೀಕರ್‌ ರಿತು ಖಂಡೂರಿ, ಮಸೂದೆ ಕುರಿತು ಮಾತನಾಡಲು ಹೆಚ್ಚು ಸಮಯ ನೀಡಿದರು.

ನಂತರ ಮಾತನಾಡಿದ ಯಶಪಾಲ್‌ ಆರ್ಯ, ‘ಮಸೂದೆಯಲ್ಲಿರುವ ಅವಕಾಶಗಳನ್ನು ಸಮಗ್ರವಾಗಿ ವಿಶ್ಲೇಷಿಸಲು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.

‘ಯುಸಿಸಿ ಮಸೂದೆ ಸಿದ್ಧಪಡಿಸಲು ರಚಿಸಿದ್ದ ತಜ್ಞರ ಸಮಿತಿಯು ವಿವಿಧ ಧರ್ಮಗಳ ಶಾಸ್ತ್ರಜ್ಞರನ್ನು ಒಳಗೊಂಡಿರಬೇಕಿತ್ತು’ ಎಂದು ಪ್ರತಿಪಾದಿಸಿದರು.

ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆಗೂ ಮುನ್ನ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಸಂವಿಧಾನದ ಪ್ರತಿಯೊಂದಿಗೆ ಮಂಗಳವಾರ ವಿಧಾನಸಭೆ ಪ್ರವೇಶಿಸಿದರು  –ಪಿಟಿಐ ಚಿತ್ರ 
ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆಗೂ ಮುನ್ನ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಸಂವಿಧಾನದ ಪ್ರತಿಯೊಂದಿಗೆ ಮಂಗಳವಾರ ವಿಧಾನಸಭೆ ಪ್ರವೇಶಿಸಿದರು  –ಪಿಟಿಐ ಚಿತ್ರ 

ಮಸೂದೆಯಲ್ಲಿನ ಪ್ರಮುಖ ಅಂಶಗಳು * ಮಸೂದೆಯು ಇಡೀ ಉತ್ತರಾಖಂಡಕ್ಕೆ ಹಾಗೂ ದೇಶದ ಇತರ ಭಾಗಗಳಲ್ಲಿ ವಾಸಿಸುತ್ತಿರುವ ರಾಜ್ಯದ ಜನರಿಗೆ ಅನ್ವಯ * ಪ್ರಸ್ತಾವಿತ ಕಾಯ್ದೆಯಿಂದ ಬುಡಕಟ್ಟು ಸಮುದಾಯಗಳಿಗೆ ವಿನಾಯಿತಿ * ಬಹುವಿವಾಹ ಪದ್ಧತಿ ನಿಷೇಧ. * ವಿವಿಧ ಸಮುದಾಯಗಳ ಪದ್ಧತಿ/ಆಚರಣೆಗಳ ಪ್ರಕಾರ ವಿವಾಹಕ್ಕೆ ಅವಕಾಶ * ಸಹಜೀವನ ಸಂಬಂಧದಲ್ಲಿರುವ ವ್ಯಕ್ತಿಗಳು 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿರಬಾರದು. ಇಬ್ಬರ ಪೈಕಿ ಯಾರಾದರೂ ಒಬ್ಬರು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಲ್ಲಿ ಅವರ ಪಾಲಕರು/ಪೋಷಕರಿಗೆ ರಜಿಸ್ಟ್ರಾರ್‌ ಮಾಹಿತಿ ನೀಡುವುದು ಕಡ್ಡಾಯ * ರಿಜಿಸ್ಟ್ರಾರ್‌ ಅವರಿಗೆ ಸಹಜೀವನ ಸಂಬಂಧ ಕುರಿತು ಒಂದು ತಿಂಗಳ ಒಳಗಾಗಿ ಹೇಳಿಕೆಯನ್ನು ಸಲ್ಲಿಸದಿದ್ದಲ್ಲಿ ಒಂದು ತಿಂಗಳ ಕಾಲ ಜೈಲು ಶಿಕ್ಷೆ ಅಥವಾ ₹ 10 ಸಾವಿರ ದಂಡ ಇಲ್ಲವೇ ಎರಡೂ ವಿಧಿಸಲು ಅವಕಾಶ * ತಪ್ಪು ಮಾಹಿತಿ ಸಲ್ಲಿಸಿದಲ್ಲಿ ದಂಡವೂ ಅಧಿಕ * ಸಹಜೀವನ ಸಂಬಂಧವಿದ್ದಾಗ ತನ್ನನ್ನು ತ್ಯಜಿಸುವ ವ್ಯಕ್ತಿಯಿಂದ ಮಹಿಳೆಯು ಜೀವನ ನಿರ್ವಹಣಾ ವೆಚ್ಚ ಕೇಳಿ ಕೋರ್ಟ್‌ ಮೆಟ್ಟಿಲೇರಬಹುದು * ಸಹಜೀವನ ಸಂಬಂಧ ಅಂತ್ಯಗೊಳಿಸಲು ಅವಕಾಶ 

ಬಿಜೆಪಿಯ ಪ್ರಮುಖ ಕಾರ್ಯಸೂಚಿ ವಿವಾಹ ವಿಚ್ಛೇದನ ಭೂಮಿ– ಸ್ವತ್ತುಗಳ ಒಡೆತನ ಹಾಗೂ ಉತ್ತರಾಧಿಕಾರ ವಿಚಾರವಾಗಿ ಎಲ್ಲ ಧರ್ಮೀಯರಿಗೂ ಒಂದೇ ಕಾನೂನು ಇರಬೇಕು ಎಂಬುದು ಬಿಜೆಪಿಯ ಪ್ರಮುಖ ಕಾರ್ಯಸೂಚಿ. ಪಕ್ಷದ ಈ ಕಾರ್ಯಸೂಚಿಯನ್ನು ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಉತ್ತರಾಖಂಡ ಸರ್ಕಾರ ಇಂತಹ ಕಾಯ್ದೆ ಜಾರಿಗೆ ಮುಂದಾಗಿರುವುದು ಗಮನಾರ್ಹ.  ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಿದಂತಾಗಿದೆ. ಅಲ್ಲದೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಕೂಡ ಇಂಥದೇ ಮಸೂದೆಯನ್ನು ಮಂಡಿಸುವ ಸಾಧ್ಯತೆಯೂ ಇದೆ. ಗುಜರಾತ್‌ ಮತ್ತು ಅಸ್ಸಾಂ ಸರ್ಕಾರಗಳು ಈ ಮಸೂದೆ ಕುರಿತು ಅಧ್ಯಯನ ನಡೆಸಿ ಅನುಷ್ಠಾನಗೊಳಿಸುವ ಸಾಧ್ಯತೆ ಇದೆ. ಬಿಜೆಪಿ ನೇತೃತ್ವದ ಸರ್ಕಾರ ಇರುವ ಗೋವಾದಲ್ಲಿ ಪೋರ್ಚುಗೀಸರ ಕಾಲದಿಂದಲೂ ಏಕರೂಪ ನಾಗರಿಕ ಕಾಯ್ದೆ ಜಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.